ಅವರ ಮಾತುಗಳು ಲೈಂಗಿಕತೆಗೆ ಸಂಬಂಧಿಸುದುವೇ ಆಗಿರುತ್ತವೆ: ನಟ ಶೈನ್ ಟಾಮ್ ಚಾಕೊ ವಿರುದ್ಧ ಆರೋಪ ಮಾಡಿದ ಮತ್ತೋರ್ವ ನಟಿ

ಕಳೆದ ಕೆಲ ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಚಿತ್ರರಂಗದ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಮೊದಲಿಗೆ ಬಂದ ಹೇಮಾ ಕಮಿಟಿಯಿಂದಾಗಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಪಡುವಂತೆ ಮಾಡಿತು. ಆ ಬಳಿಕ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂತು. ಇತ್ತೀಚೆಗೆ ಸಹ ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೊ (Shine Tom Chocko) ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಡ್ರಗ್ಸ್ ಪ್ರಕರಣ ಎರಡರಲ್ಲೂ ಆರೋಪಿಯಾಗಿ ಪೊಲೀಸರಿಂದಲೂ ಬಂಧಿತಗೊಂಡಿದ್ದರು.
ಇದೀಗ ಜಾಮೀನು ಪಡೆದ ಬಳಿಕ ಮಲಯಾಳಂ ಸಿನಿಮಾ ಸಂಘದ ಸಭೆಯಲ್ಲಿ ಶೈನ್ ಟಾಮ್ ಚಾಕೊ ಬಹಿರಂಗ ಕ್ಷಮೆ ಕೇಳಿದ್ದಾರೆ. ಕೊನೆಯ ಅವಕಾಶ ನೀಡಿ, ಮುಂದಿನ ದಿನಗಳಲ್ಲಿ ವರ್ತನೆ ತಿದ್ದಿಕೊಳ್ಳುತ್ತೇನೆ ಎಂದಿದ್ದಾರೆ. ಅದಾದ ಮರು ದಿನವೇ ಮತ್ತೊಬ್ಬ ನಟಿ ಶೈನ್ ಟಾಮ್ ಚಾಕೊ ವಿರುದ್ಧ ದುರ್ವರ್ತನೆಯ ಆರೋಪ ಮಾಡಿದ್ದಾರೆ.
ನಟಿ ಅಪರ್ಣಾ ಜಾನ್ ಇದೀಗ ಶೈನ್ ಟಾಮ್ ಚಾಕೊ ಮೇಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಟನ ವಿರುದ್ಧ ದೂರು ನೀಡಿರುವ ನಟಿ ವಿನ್ಸಿ ಅಲೋಷಿಯಸ್ ಅವರು ಹೇಳಿರುವ ಮಾತುಗಳನ್ನು ಅನುಮೋದಿಸಿರುವ ನಟಿ ಅಪರ್ಣಾ ಜಾನ್, ಟಾಮ್ ಚಾಕೊ ಮಾತುಗಳು ‘ಬಾಯಿ ಭೇದಿ’ಯ ಹಾಗಿರುತ್ತವೆ ಎಂದು ಕಟು ನಿಂದನೆ ಮಾಡಿದ್ದಾರೆ.
‘ಸೆಟ್ನಲ್ಲಿ ಶೈನ್ ಟಾಮ್ ಚಾಕೊ ಅವರ ಎನರ್ಜಿ ಅಸಾಧ್ಯವಾದುದು, ಅವರು ಬಹಳ ಒಳ್ಳೆಯ ನಟ. ಅತ್ತಿಂದಿತ್ತ ಓಡಾಡುತ್ತಲೇ ಇರುತ್ತಾರೆ ಎಲ್ಲರನ್ನೂ ಮಾತನಾಡಿಸುತ್ತಾ ಇರುತ್ತಾರೆ. ಅವರು ಆಡುವ ಬಹುತೇಕ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಅದರಲ್ಲೂ ನಟಿಯರ ಬಳಿಯಂತೂ ಸಂಯಮ ಇಲ್ಲದೆ ಮಾತನಾಡುತ್ತಾರೆ. ನಟಿಯರ ಜೊತೆಗೆ ಅವರು ಆಡುವ ಮಾತುಗಳು ಬಹುತೇಕ ಲೈಂಗಿಕತೆಗೆ, ಮಹಿಳೆಯರ ದೇಹಕ್ಕೆ ಸಂಬಂಧಿಸುದುವೇ ಆಗಿರುತ್ತವೆ. ನಟಿ ವಿನ್ಸಿ ಅಲೋಷಿಯಸ್ ಗೆ ಆಗಿರುವ ಕೆಟ್ಟ ಅನುಭವ ನನಗೂ ಆಗಿದೆ’ ಎಂದಿದ್ದಾರೆ ನಟಿ.
ನಿಮ್ಮ ಪ್ರತಿಕ್ರಿಯೆ ಏನು?






