ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಯಾವುದೇ ಆಹಾರವಿದ್ರೂ ಅದಕ್ಕೆ ಸ್ವಲ್ಪ ಉಪ್ಪು ಹಾಕ್ಲೇಬೇಕು. ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಉಪ್ಪಿಲ್ಲದ ಆಹಾರ ಸೇವನೆ ಮಾಡೋದು ಕಷ್ಟ. ಹಾಗಂತ ಅತಿಯಾಗಿ ಉಪ್ಪಿನ ಸೇವನೆ ಮಾಡೋದು ಕೂಡ ಒಳ್ಳೆಯದಲ್ಲ. ಉಪ್ಪು ಆಹಾರದ ರುಚಿ ಹೆಚ್ಚಿಸುವ ಕೆಲಸವನ್ನು ಮಾತ್ರ ಮಾಡುವುದಿಲ್ಲ ಅದ್ರಿಂದ ಅನೇಕ ಪ್ರಯೋಜನವಿದೆ. ದೇಹದಿಂದ ರೋಗಗಳು ದೂರವಾಗುವುದಷ್ಟೇ ಅಲ್ಲದೇ ಮನಸ್ಸು ಕೂಡ ಫ್ರೆಶ್ ಆಗಿರುತ್ತದೆ. ಹಾಗಾದ್ರೆ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಸಿಗುವ ಇತರ ಆರೋಗ್ಯ ಪ್ರಯೋಜನಗಳು ಯಾವುದು ಎಂದು ವಿವರವಾಗಿ ತಿಳಿಯೋಣ ಬನ್ನಿ.
ಚರ್ಮಕ್ಕೆ ಒಳ್ಳೆಯದು:
ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದಲ್ಲಿ ಅಡಗಿರುವ ಕೊಳೆ ಸ್ವಚ್ಛವಾಗುತ್ತದೆ. ಅಲ್ಲದೆ ಇದು ಸತ್ತ ಜೀವಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಬೇಸಿಗೆಯಲ್ಲಿ ಬೆವರಿನಿಂದ ಉಂಟಾಗುವ ರಿಂಗ್‌ವರ್ಮ್, ತುರಿಕೆ ಇತ್ಯಾದಿ ಚರ್ಮದ ಸೋಂಕುಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮವನ್ನು ಕಾಂತಿಯುತವಾಗಿಸಲು ಸಹಕಾರಿ. ಅಷ್ಟೇ ಅಲ್ಲದೆ ಕಲ್ಲುಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಕೀಲು ನೋವಿನಿಂದ ಪರಿಹಾರ:
ಪ್ರತಿದಿನ ಓಡಾಟದ ಸಂದರ್ಭದಲ್ಲಿ ದೇಹದಲ್ಲಿ ನೋವು ಕಾಣಿಸಿಕೊಂಡರೆ, ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಸ್ನಾನ ಮಾಡಬೇಕು. ಇದು ನೋವನ್ನು ನಿವಾರಿಸಲು, ಕೀಲು ನೋವು, ಮೊಣಕಾಲು ಮತ್ತು ಬೆನ್ನು ನೋವಿನಿಂದಲೂ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರಿಗೆ ಕಲ್ಲುಪ್ಪು ಸೇರಿಸಿ ಸ್ನಾನ ಮಾಡುವುದರಿಂದ ಊತ ಸಹ ಕಡಿಮೆಯಾಗುತ್ತದೆ.
ಒತ್ತಡವನ್ನು ದೂರ ಮಾಡುತ್ತದೆ:
ಪ್ರತಿದಿನ ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಇದು ಆಯಾಸವನ್ನು ನಿವಾರಿಸುವುದರ ಜೊತೆಗೆ ದೇಹಕ್ಕೆ ಉಲ್ಲಾಸವನ್ನು ಒದಗಿಸುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ:
ಕಲ್ಲುಪ್ಪು ಬೇರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಸುಡುವ ಸಂವೇದನೆ, ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಹಕಾರಿ:
ಉಪ್ಪು ಉತ್ತಮ ಶುದ್ಧೀಕರಣ ಗುಣಗಳನ್ನು ಹೊಂದಿರುವುದರಿಂದ ಸ್ನಾನದ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಸ್ನಾನ ಮಾಡುವುದರಿಂದ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಕಲ್ಮಶಗಳನ್ನು ತೆಗೆದು ಹಾಕಬಹುದು.
ಸ್ನಾನಕ್ಕೆ ಉಪ್ಪುನೀರನ್ನು ತಯಾರಿಸುವುದುಹೇಗೆ:
ಮೊದಲು ಒಂದು ಬಕೆಟ್ ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿ. ಈ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಲ್ಲಿ ಉಪ್ಪು ಬೆರೆತ ನಂತರ ಸ್ನಾನ ಮಾಡಿ. ಉಪ್ಪು ನೀರಿನಿಂದ ಸ್ನಾನ ಮಾಡುವುದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ ಹಾಗೆಯೇ ಇದರಿಂದ ನಕಾರಾತ್ಮಕ ಶಕ್ತಿಯನ್ನು ಕೂಡ ದೂರ ಮಾಡಬಹುದು.
ನಿಮ್ಮ ಪ್ರತಿಕ್ರಿಯೆ ಏನು?






