ಕಿರಿದಾದ ಬೀದಿಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು.. ಬೆಚ್ಚಿಬಿದ್ದ ಭಕ್ತರು! ಜಗನ್ನಾಥ ರಥಯಾತ್ರೆಯಲ್ಲಿ ಏನಾಯ್ತು?

ಗಾಂಧಿನಗರ:- 148ನೇ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭವಾಗಿದೆ. ಭಕ್ತರೆಲ್ಲರೂ ಸಂಭ್ರಮ ಸಡಗರದಿಂದ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಇದೇ ವೇಳೆ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ದಿಕ್ಕಾಪಾಲಾಗಿ ಓಡಿದ ಘಟನೆ ಜರುಗಿದೆ. ಇದರಿಂದ ನೆರೆದಿದ್ದ ಭಕ್ತರು ಗಾಬರಿಗೊಂಡರು.
ಅಹಮದಾಬಾದ್‌ನಲ್ಲಿ ಶುಕ್ರವಾರ ನಡೆದ 148ನೇ ಜಗನ್ನಾಥ ರಥಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ. ಪರಿಣಾಮ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ 10:15 ರ ಸುಮಾರಿಗೆ ರಥಯಾತ್ರೆ ನಗರದ ಖಾದಿಯಾ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಇದ್ದಕ್ಕಿದ್ದಂತೆ ಗುಂಪಿನಿಂದ ದೂರ ಸರಿದು ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿತು. ಕಿರಿದಾದ ಬೀದಿಯಾದ್ದರಿಂದ ಜನರು ಭಯಭೀತರಾದರು. ಇದರ ಜೊತೆ ಇನ್ನೆರಡು ಆನೆಗಳು ಸಹ ಓಡಿದವು. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮಾವತರು ಆನೆಗಳನ್ನು ನಿಯಂತ್ರಿಸಿದರು. ಆನೆಗಳನ್ನು ಕರೆದೊಯ್ದ ಬಳಿಕ ಮೆರವಣಿಗೆ ಮುಂದುವರಿಯಿತು
ಗಾಯಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಪುರುಷ ಭಕ್ತನನ್ನು ಚಿಕಿತ್ಸೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು
ನಿಮ್ಮ ಪ್ರತಿಕ್ರಿಯೆ ಏನು?






