ಜಾತಿಗಣತಿ ಸಿಬ್ಬಂದಿಗೆ ಕ್ಲಾಸ್ ತೆಗೆದ ಕೇಂದ್ರ ಸಚಿವ ಸೋಮಣ್ಣ
ಬೆಂಗಳೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಹಿನ್ನಲೆಯಲ್ಲಿ ಮನೆಗೆ ಬಂದ ಗಣತಿ ಸಿಬ್ಬಂದಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು ವಿಜಯನಗರದಲ್ಲಿರುವ ಸೋಮಣ್ಣ ಅವರ ಮನೆಗೆ 9 ಮಂದಿ ಗಣತಿ ಸಿಬ್ಬಂದಿ ತೆರಳಿದ ಸಂದರ್ಭದಲ್ಲಿ ಈ ಪ್ರಸಂಗ ಜರುಗಿತು. ಇಷ್ಟು ಜನ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ ಸೋಮಣ್ಣ, “ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಿಸುತ್ತದೆ. ಹೀಗಿರುವಾಗ ಇಷ್ಟು ಪ್ರಶ್ನೆಗಳೇನು? ಇದು ಎಲ್ಲವನ್ನೂ ಸರ್ಕಾರಕ್ಕೆ ನೀವು ತಿಳಿಸಬೇಕಲ್ಲವೇ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು,” ಎಂದು ಸಿಬ್ಬಂದಿಗೆ ಸೂಚಿಸಿದರು.
ಸಿಬ್ಬಂದಿ “ಉಪಜಾತಿ ಯಾವುದು?” ಎಂದು ಕೇಳಿದಾಗ, “ಅದೆಲ್ಲಾ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ” ಎಂದು ಉತ್ತರಿಸಿದರು. ಮದುವೆಯಾದ ವರ್ಷ ಕೇಳಿದಾಗ, “ಅದು ನನ್ನ ಅಪ್ಪ-ಅಮ್ಮನನ್ನೇ ಕೇಳಬೇಕು, 26 ಅಂತಾ ಬರೆದುಕೊಳ್ಳಿ” ಎಂದು ಹೇಳಿದರು.
ಇದಲ್ಲದೆ, ಸಮೀಕ್ಷೆ ವೋಟ್ಗಾಗಿ ಸಿದ್ದರಾಮಯ್ಯ ನಡೆಸುತ್ತಿರುವುದು ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು. “ನೀವು ಕೇಳುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ, ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನೇ ಬರೆಯಿರಿ. ಸಿದ್ದರಾಮಯ್ಯ, ಡಿಕೆಶಿ ಅವರನ್ನು ಯಾವ ಗ್ರೂಪ್ನಲ್ಲಿ ಹಾಕ್ತೀರಿ?” ಎಂದು ಮರು ಪ್ರಶ್ನಿಸಿದ ಘಟನೆ ನಡೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?