ಕೆಆರ್‌ಎಸ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಕೆ.ಎನ್. ರಾಜಣ್ಣ
ತುಮಕೂರು: ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸವನ್ನು ಹಲವುವೇಳೆ ಅವಹೇಳನಕಾರಿ ರೀತಿಯಲ್ಲಿ ತೋರಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಕನ್ನಂಬಾಡಿ ಕಟ್ಟೆ (ಇಂದಿನ ಕೃಷ್ಣರಾಜ ಸಾಗರಾ – KRS) ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್ ಎಂಬುದನ್ನು ಮರೆಯಬಾರದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಭಾನುವಾರ ತುಮಕೂರಿನಲ್ಲಿ ಮಾತನಾಡಿದ ಅವರು, "ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಕಾಲದಲ್ಲಿ ಆ ಕಟ್ಟೆಯನ್ನು ಪೂರ್ಣಗೊಳಿಸಿದರು. ಆ ಸಮಯದಲ್ಲಿ ಒಡೆಯರ್‌ರಿಗೆ ಹಣಕಾಸಿನ ತೊಂದರೆ ಬಂದು, ಮನೆಯಲ್ಲಿದ್ದ ಚಿನ್ನವನ್ನು ತೆಗೆದುಕೊಂಡು ಬಾಂಬೆ ಮಾರಾಟ ಮಾಡಿದರು. ಹೀಗೆ KRS ಡ್ಯಾಂ ಸಂಪೂರ್ಣಗೊಂಡಿತು. ಇಂತಹ ಮಹತ್ವದ ಘಟನೆಗಳನ್ನು ಮಕ್ಕಳಿಗೆ ಸ್ಪಷ್ಟವಾಗಿ ಕಲಿಸಬೇಕು, ಇತಿಹಾಸವನ್ನು ತಿರುಚಬಾರದು," ಎಂದರು.
ರಾಜಣ್ಣ ಅವರು ಟಿಪ್ಪು ಸುಲ್ತಾನ್ ಯುದ್ಧಗಳ ಇತಿಹಾಸವನ್ನೂ ಸ್ಮರಿಸಿದರು. "ಅವರು ನಾಲ್ಕು ಯುದ್ಧಗಳಲ್ಲಿ ಪಾಲ್ಗೊಂಡರು. ಮೂರನೇ ಯುದ್ಧದಲ್ಲಿ ಸೋತಾಗ, ಬ್ರಿಟಿಷರು 3 ಕೋಟಿ 30 ಲಕ್ಷ ರೂ. ಯುದ್ಧ ಖರ್ಚು ಬೇಡಿದರು. ಹಣ ಕೊಡಲು ಸಾಧ್ಯವಾಗದೆ, ತನ್ನ ಮಕ್ಕಳನ್ನೇ ಅಡವಿಟ್ಟಿದ್ದರು. ಬಳಿಕ ದುಡ್ಡು ಕೊಟ್ಟು ಅವರನ್ನು ಬಿಡಿಸಿಕೊಂಡರು. ನಾಲ್ಕನೇ ಯುದ್ಧದಲ್ಲಿ ಮೀರ್ ಸಾದಿಕ್ ದ್ರೋಹ ಹಾಗೂ ಶಸ್ತ್ರಾಗಾರದ ಹಾನಿಯಿಂದಾಗಿ ಟಿಪ್ಪು ಸೋಲಬೇಕಾಯಿತು. ಇಲ್ಲದಿದ್ದರೆ ಯುದ್ಧದಲ್ಲಿ ಸೋಲುತ್ತಿರಲಿಲ್ಲ," ಎಂದು ಅವರು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?