ನಟ ಮೋಹನ್ ಲಾಲ್'ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಖ್ಯಾತ ನಟ ಮೋಹನ್ ಲಾಲ್ ಅವರಿಗೆ 2023ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಈ ಕುರಿತು ಪ್ರಕಟಣೆ ನೀಡಿದ್ದು, ಸೆಪ್ಟೆಂಬರ್ 23ರಂದು ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಲಯಾಳಂ ಚಿತ್ರರಂಗದ ದಿಗ್ಗಜ ನಟರಾಗಿರುವ ಮೋಹನ್ ಲಾಲ್, ಮಲಯಾಳಂ ಜೊತೆಗೆ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿಯೂ ತಮ್ಮ ಅಭಿನಯದ ಮೆರಗು ತೋರಿದ್ದಾರೆ. ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ.
ಮಲಯಾಳಂ ಚಿತ್ರರಂಗದಿಂದ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಇದು ಎರಡನೇ ಅವಕಾಶ. 2004ರಲ್ಲಿ ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಈ ಪ್ರಶಸ್ತಿಗೆ ಭಾಜನರಾಗಿದ್ದರು.
2022ರ ಸಾಲಿನ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ, 2019ರಲ್ಲಿ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಅವರಿಗೆ ಲಭಿಸಿತ್ತು. ಇದೀಗ ದಕ್ಷಿಣ ಭಾರತದ ಮತ್ತೊಬ್ಬ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಈ ಗೌರವ ಸಂದಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಿನಿಮಾ ತಾರೆಗಳು ಮತ್ತು ರಾಜಕಾರಣಿಗಳು ಮೋಹನ್ ಲಾಲ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?