ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆ! ಕಾರಣ ನಿಗೂಢ
ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆಯಾಗಿದ್ದು, ಈ ಘಟನೆಗೆ ಸಂಬಂಧಿಸಿ ಪೊಲೀಸರು ಕೊಲೆ ಪ್ರಕರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಪತ್ತೆಯಾದ ಕೊಠಡಿಯಲ್ಲಿ ‘ಸನ್ನಿ’ ಎಂಬ ವ್ಯಕ್ತಿ ವಾಸವಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಶವ ಆತನದ್ದೇ ಎಂಬುದಕ್ಕೆ ಸ್ಪಷ್ಟತೆಯಿಲ್ಲ. ಸನ್ನಿ ಕಾಣೆಯಾಗಿದ್ದು, ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಟ್ಟಡದ ನಿವಾಸಿಗಳು ಕೋಣೆಯಿಂದ ಹೆಚ್ಚು ಹೊಗೆ ಬರುತ್ತಿರುವುದನ್ನು ಗಮನಿಸಿದರು. ಕೂಡಲೇ ಕುನ್ನಂಕುಲಂ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿ ನಂದಿಸಿದ ನಂತರ ಕೋಣೆಯೊಳಗೆ ಅರೆಬೆಂದ ಶವ ಪತ್ತೆಯಾಯಿತು.
ಶವವು ಗಂಭೀರವಾಗಿ ಸುಟ್ಟಿದ್ದರಿಂದ ಗುರುತು ಪತ್ತೆಹಚ್ಚಲು ಸಾದ್ಯವಾಗಿಲ್ಲ. ಸನ್ನಿ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಇಡೀ ಸ್ಥಳವನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಅಗ್ನಿ ಅಪಘಾತವೋ ಅಥವಾ ಕೊಲೆಯೋ ಎಂಬುದನ್ನು ಪೊಲೀಸರ ತನಿಖೆ ಸ್ಪಷ್ಟಗೊಳಿಸಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?