ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ: ಆರ್.ಅಶೋಕ್ ಆಕ್ರೋಶ

ಬೆಂಗಳೂರು: ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಮುಸ್ಲಿಮರ ಬಜೆಟ್. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ.
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1,000 ಕೋಟಿ ರೂ. ನೀಡಲಾಗಿದೆ. ವಕ್ಫ್ ಬೋರ್ಡ್ ಮುಚ್ಚಿ ಎಂದರೆ, ಅದಕ್ಕೆ 150 ಕೋಟಿ ರೂ. ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಆದರೆ ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ ಎಂದು ದೂರಿದರು.
ಎತ್ತಿನಹೊಳೆ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಆದರೆ ಹಣ ಎಷ್ಟು ನಿಗದಿ ಮಾಡಿದ್ದಾರೆ ಎಂದು ಹೇಳಿಲ್ಲ. ತುಂಗಾ, ಕೃಷ್ಣೆ ಮೊದಲಾದ ನೀರಾವರಿ ಯೋಜನೆಗಳಿಗೆ ಹಣ ನೀಡಿಲ್ಲ. ಅಭಿವೃದ್ಧಿಗೆ ಒಂದು ತೊಟ್ಟು ನೀರು ಕೂಡ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಸುರಂಗ ಮಾಡಲು ಯೋಜನೆ ರೂಪಿಸಿದ್ದಾರೆ. 40,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಘೋಷಿಸಲಾಗಿದೆ.
ಫೆರಿಫರಲ್ ರಿಂಗ್ ರಸ್ತೆಯನ್ನೇ ಇನ್ನೂ ಮಾಡಿಲ್ಲ. ಇನ್ನು ಸುರಂಗ ಯೋಜನೆ ಮಾಡಲು ಯಾರೂ ಮುಂದೆ ಬರಲ್ಲ. ಬೆಂಗಳೂರಿನ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ, ಕಸದ ಸಮಸ್ಯೆ ಪರಿಹರಿಸುವ ಬಗ್ಗೆ ಹೇಳಿಲ್ಲ. ಚುನಾವಣೆ ಇರುವುದರಿಂದ ಇಂತಹ ಬೋಗಸ್ ಬಜೆಟ್ ಮಂಡಿಸಲಾಗಿದೆ ಎಂದು ಟೀಕಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






