ರಾಜ್ಯದಲ್ಲಿ 26 ಸಾವಿರ ಶಿಕ್ಷಕರ ನೇಮಕಾತಿ: ಸರ್ಕಾರದಿಂದ ಸಿಹಿ ಸುದ್ದಿ!
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇರಬೇಕೆಂದು ಕಾದು ಕುಳಿತ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕದಾದ್ಯಂತ 26 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 23ರಿಂದ ನವೆಂಬರ್ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 7ರಂದು ಟಿಇಟಿ (Teacher Eligibility Test) ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಶೀಘ್ರದಲ್ಲೇ ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗೂ ಸರ್ಕಾರ ಆದೇಶ ಹೊರಡಿಸಲಿದೆ. ರಾಜ್ಯದಲ್ಲಿ 800 ಕೆಪಿಎಸ್ (Karnataka Public Schools) ಪ್ರಾರಂಭಿಸಲಾಗಿದ್ದು, 6ನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ₹3,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ನವೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿಯಿಂದ ಗುದ್ದಲಿ ಪೂಜೆ ನಡೆಯಲಿದೆ. ಜೊತೆಗೆ, ರಾಹುಲ್ ಗಾಂಧಿಯ ಸಲಹೆಂತೆ ಎಐ ಆಧಾರಿತ ಶಿಕ್ಷಣವನ್ನು ರಾಜ್ಯದ ಶಾಲೆಗಳಲ್ಲಿ ಅಳವಡಿಸಲಾಗುವುದು. ಈಗಿನಿಂದಲೇ 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಮತ್ತು 6ನೇ ತರಗತಿಯಿಂದ ಸ್ಕಿಲ್ ಸ್ಕೂಲ್ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಜಾತಿ ಸಮೀಕ್ಷೆ ಶೇ. 90.12ರಷ್ಟು ಪೂರ್ಣಗೊಂಡಿದ್ದು, ಇದರಿಂದ ಬಜೆಟ್ ರೂಪಿಸಲು ಸಹಕಾರಿ ಆಗಲಿದೆ ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 97ರಷ್ಟು ಸಮೀಕ್ಷೆ ಮುಕ್ತಾಯವಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅವರು ದೊಡ್ಡ ಉದ್ಯಮಿಗಳ ಸಹಕಾರವೂ ಅಗತ್ಯ ಎಂದು ಹೇಳಿ, ಇನ್ಫೋಸಿಸ್ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಕೈಜೋಡಿಸಲು ಮನವಿ ಮಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?