ಸಹಕರಿಸಿದರೆ ಫುಲ್ ಮಾರ್ಕ್ಸ್ ಕೊಡ್ತೀನಿ: ವಿದ್ಯಾರ್ಥಿನಿಗೆ HOD ಲೈಂಗಿಕ ದೌರ್ಜನ್ಯ!
ಬೆಂಗಳೂರು: ಖಾಸಗಿ ಕಾಲೇಜಿನ ವಿಭಾಗದ ಮುಖ್ಯಸ್ಥ (ಎಚ್‌ಒಡಿ) ವಿದ್ಯಾರ್ಥಿನಿಯನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ವಿದ್ಯಾರ್ಥಿನಿ ತಿಲಕ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಗೆ ಕಡಿಮೆ ಹಾಜರಾತಿ ಇರುವುದನ್ನು ಉಲ್ಲೇಖಿಸಿ, ಪೂರ್ಣ ಅಂಕ ನೀಡುವ ಆಮಿಷವೊಡ್ಡಿ ಎಚ್‌ಒಡಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ.
ಆರೋಪಿ ಸಂಜೀವ್ ಕುಮಾರ್ ಮಂಡಲ್, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ) ವಿಭಾಗದ ಎಚ್‌ಒಡಿ ಆಗಿದ್ದು, ಅಕ್ಟೋಬರ್ 2ರಂದು ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಕುಟುಂಬದ ಜೊತೆ ಊಟ ಮಾಡೋಣ”ಎಂದು ಆಹ್ವಾನಿಸಿದ್ದರು. ಆದರೆ ವಿದ್ಯಾರ್ಥಿನಿ ಮನೆಗೆ ತೆರಳಿದಾಗ, ಮೊಂಡಲ್ ಒಬ್ಬರೇ ಇದ್ದರು.
ಮಂಡಲ್ ಊಟ ನೀಡಿದ ಬಳಿಕ ವಿದ್ಯಾರ್ಥಿನಿ ಹೊರಡುವ ಪ್ರಯತ್ನ ಮಾಡಿದಾಗ, ನಿನಗೆ ಹಾಜರಾತಿ ಕಡಿಮೆ ಇದೆ, ಸಹಕರಿಸಿದರೆ ಪೂರ್ಣ ಅಂಕ ಕೊಡಿಸಲು ಸಹಾಯ ಮಾಡುತ್ತೇನೆ ಎಂದು ಒತ್ತಾಯಿಸಿದ್ದಾರಂತೆ. ಈ ವೇಳೆ ಸ್ನೇಹಿತೆಯಿಂದ ಫೋನ್ ಬಂದಿದ್ದು, ಅದನ್ನೇ ನೆಪ ಮಾಡಿಕೊಂಡು ವಿದ್ಯಾರ್ಥಿನಿ ಮಂಡಲ್ ಅವರ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?