ಸಿಎಂ ಆಗಲು ಯೋಗ ಮಾತ್ರ ಅಲ್ಲ ಯೋಗ್ಯತೆ ಬೇಕು: ಡಿಕೆಶಿಗೆ ಟಾಂಗ್ ಕೊಟ್ಟ ಸಿ.ಟಿ ರವಿ

ಬೆಂಗಳೂರು: ಸಿಎಂ ಆಗಲು ಯೋಗ ಮಾತ್ರ ಅಲ್ಲ ಯೋಗ್ಯತೆ ಬೇಕು ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಡಿಕೆಶಿ ಸಿಎಂ ಆಗುವ ಕುರಿತು ಜೈನಗುರು ಭವಿಷ್ಯವಾಣಿ ನುಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯೋಗ ಇದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಯೋಗ್ಯತೆ ಇದ್ದವರು ಮಾತ್ರ ಒಳ್ಳೆಯ ಮುಖ್ಯಮಂತ್ರಿ ಆಗುತ್ತಾರೆ. ಸಿಎಂ ಆಗಲು ಯೋಗ್ಯತೆ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಎದುರೇ ಡಿಕೆಶಿ ಸಿಎಂ ಆಗಲಿ ಎಂಬ ಘೋಷಣೆ ಮೊಳಗಿಸುತ್ತಾರೆ. ಸಿದ್ದರಾಮಯ್ಯಗೆ ಇದು ದೊಡ್ಡ ಅಪಮಾನ. ಇದಕ್ಕಿಂತ ದೊಡ್ಡ ಅಪಮಾನ ಇಲ್ಲ. ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸಂಪುಟ ನಿರ್ಣಯದ ಪ್ರತಿ ಹರಿದು ಹಾಕಿದ್ದರು. ಕರ್ನಾಟಕದಲ್ಲಿ ಏನು ಕತೆ ಇದು? ಸಿದ್ದರಾಮಯ್ಯ ಅವರನ್ನು ಎದುರು ಕೂರಿಸಿಕೊಂಡೇ ಅಪಮಾನ ಮಾಡಿದ್ದಾರಲ್ಲ.
ಸಿದ್ದರಾಮಯ್ಯ ಸ್ವಾಭಿಮಾನಿ ಎಂದು ನಾನು ಅಂದುಕೊಂಡಿದ್ದೆ. ಅವರದ್ದು ಸ್ವಾಭಿಮಾನದ ರಾಜಕಾರಣ ಅಂದುಕೊಂಡಿದ್ದೆ. ನನ್ನಂಥವನು ಸಿಎಂ ಆಗಿ ಹೀಗೆಲ್ಲ ಆಗಿದ್ದರೆ ಒಂದು ಕ್ಷಣವೂ ನಾನು ಅಪಮಾನ ಸಹಿಸುತ್ತಿರಲಿಲ್ಲ. ಸಿದ್ದರಾಮಯ್ಯ ಅದು ಹೇಗೆ ಈ ಅಪಮಾನ ಸಹಿಸಿಕೊಂಡರೋ ಗೊತ್ತಿಲ್ಲ. ಇದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






