ಮೈಸೂರು: ಸರಗೂರು ತಾಲೂಕಿನ ಬೆಣ್ಣೆಗೆರೆ ಬಳಿ ಭಾನುವಾರ ನಡೆದ ಹುಲಿ ದಾಳಿಯಿಂದಾದ ಸಾವು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, “ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಸಚಿವ ಖಂಡ್ರೆ, ಹುಲಿ ದಾಳಿಯಲ್ಲಿ ಮೃತಪಟ್ಟ ರಾಜಶೇಖರ್ ಅವರ ಪಾರ್ಥೀವ ದೇಹಕ್ಕೆ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಅಂತಿಮ ನಮನ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹುಲಿ ಹಾವಳಿ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಚ್.ಡಿ ಕೋಟೆ ಅಥವಾ ಸರಗೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಇದ್ದರೂ ಶವವನ್ನು ಮೈಸೂರಿಗೆ ತರಲು ಏಕೆ ತೀರ್ಮಾನಿಸಲಾಯಿತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ,” ಎಂದು ಸ್ಪಷ್ಟಪಡಿಸಿದರು.
, “ಮಾನವ–ವನ್ಯಜೀವಿ ಸಂಘರ್ಷ ಹೊಸದಲ್ಲ. ಅರಣ್ಯ ದಂಚಿನ ಗ್ರಾಮಗಳ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅವಶ್ಯಕತೆ,” ಎಂದು ಹೇಳಿದರು.