6 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ವಿಜಯ್–ರಶ್ಮಿಕಾ! ವಿಲನ್ ಆಗಿ ಹಾಲಿವುಡ್ ಸ್ಟಾರ್
ತೆಲುಗು ಚಿತ್ರರಂಗದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. 2019ರಲ್ಲಿ ಬಿಡುಗಡೆಯಾದ ‘ಡಿಯರ್ ಕಾಮ್ರೆಡ್’ ನಂತರ ಈ ಜೋಡಿ ಪರದೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಬರೋಬ್ಬರಿ ಆರು ವರ್ಷಗಳ ಬಳಿಕ ಇಬ್ಬರೂ ಮತ್ತೆ ಕೈಜೋಡಿಸಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.
ವಿಜಯ್–ರಶ್ಮಿಕಾ ಇಬ್ಬರೂ ಎರಡು ಸಿನಿಮಾಗಳಿಗೆ ಒಪ್ಪಂದ ಮಾಡಿದ್ದಾರೆ. ಅವುಗಳಲ್ಲಿ ‘ಗೀತಾ ಗೋವಿಂದಂ 2’ ಮತ್ತು ನಿರ್ದೇಶಕ ರಾಹುಲ್ ಸಾಂಕೃತ್ಯಾಯನ ಅವರ ಹೊಸ ಸಿನಿಮಾ ಪ್ರಮುಖ. ಪ್ರಸ್ತುತ ರಾಹುಲ್ ನಿರ್ದೇಶನದ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.
ಈ ಸಿನಿಮಾದಲ್ಲಿ ವಿಶೇಷ ಆಕರ್ಷಣೆ ಎಂದರೆ – ಹಾಲಿವುಡ್ ನಟ ಅರ್ನಾಲ್ಡ್ ವೊಸ್ಲು (Arnold Vosloo) ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನಪ್ರಿಯ ಹಾಲಿವುಡ್ ಬ್ಲಾಕ್‌ಬಸ್ಟರ್ ‘ದಿ ಮಮ್ಮಿ’, ‘ಮಮ್ಮಿ ರಿಟರ್ನ್ಸ್’, ‘ಜಿಐ: ಜೋ’, ‘ಸ್ಪೈಡರ್‌ಮ್ಯಾನ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ವೊಸ್ಲು, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಇದಕ್ಕೂ ಮೊದಲು ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾದಲ್ಲಿ ಖ್ಯಾತ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. ಈ ಬಾರಿ ಹಾಲಿವುಡ್ ಸ್ಟಾರ್ ವೊಸ್ಲು ಅವರ ಜೊತೆಯಲ್ಲಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?