ಅನರ್ಹ BPL ಕಾರ್ಡ್ ರದ್ದು ವಿಚಾರ: ಮಹತ್ವದ ಹೇಳಿಕೆ ನೀಡಿದ ಸಚಿವ ಮುನಿಯಪ್ಪ!
ಬೆಂಗಳೂರು: ರಾಜ್ಯದಲ್ಲಿ ಇರುವ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡದೇ ಎಪಿಎಲ್‌ಗೆ ವರ್ಗಾಯಿಸುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಯಾವುದೇ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಬಿಪಿಎಲ್‌ನಲ್ಲಿ ಅನರ್ಹರಾಗಿರುವವರನ್ನು ನಿಯಮ ಪ್ರಕಾರ ಎಪಿಎಲ್‌ಗೆ ಪರಿಷ್ಕರಣೆ ಮಾಡುತ್ತೇವೆ. ಎಲ್ಲ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ವರ್ಗಾವಣೆ ಸಂದರ್ಭದಲ್ಲಿ ಏನಾದರೂ ತೊಂದರೆ ಉಂಟಾದರೆ 24 ಗಂಟೆಯೊಳಗೆ ಸರಿಪಡಿಸಿ ಪಡಿತರ ವಿತರಣೆ ಮಾಡಲಾಗುವುದು.ಈಗಾಗಲೇ ರಾಜ್ಯದ ನ್ಯಾಯಬೆಲೆ ಅಂಗಡಿಗಳ ಮುಂದೆ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪಟ್ಟಿ ಹಾಕಲಾಗಿದೆ. ಲಿಸ್ಟ್‌ನಲ್ಲಿ ಹೆಸರು ಇರುವವರಿಗೆ ತಾತ್ಕಾಲಿಕವಾಗಿ (3 ದಿನ) ಪಡಿತರ ವಿತರಣೆ ತಡೆಹಿಡಿಯಲು ಮೌಖಿಕ ಸೂಚನೆ ನೀಡಲಾಗಿದೆ.
ಈಗಾಗಲೇ, ಅನರ್ಹ ಕಾರ್ಡ್‌ದಾರರ ಪಟ್ಟಿಯನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ನಗರಗಳಲ್ಲಿರುವ ಅನ್ನಭಾಗ್ಯ ಪಡಿತರ ಅಂಗಡಿಗಳ ಮಾಲಿಕರು ಈ ಪಟ್ಟಿಯನ್ನು ಪ್ರದರ್ಶಿಸಿದ್ದು, ಪಟ್ಟಿಯಲ್ಲಿರುವವರು ತಕ್ಷಣವೇ ಆಧಾರ್, ಪಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯಂತಹ ಅಗತ್ಯ ದಾಖಲೆಗಳನ್ನು ನೀಡಿ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ. ಅಗತ್ಯ ದಾಖಲೆಗಳನ್ನು ನೀಡದ ಅಥವಾ ಅನರ್ಹರೆಂದು ಕಂಡುಬಂದವರ ಕಾರ್ಡುಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗುವುದು.
ವಾರ್ಷಿಕ ಆದಾಯ ₹1,20,000 ಮೀರಿದವರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುವ ಹಿನ್ನೆಲೆಯಲ್ಲಿ ಕೆಲವೆಡೆ ಆಕ್ರೋಶ, ಇನ್ನೂ ಕೆಲವೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?