'ಚಿರಂಜೀವಿ'ಯಾಗಲು ಪುಟಿನ್ ಬಯಕೆ? ವೃದ್ಧಾಪ್ಯ ತಡೆಯುವ ತುರ್ತು ಔಷಧ ಸಿದ್ಧಪಡಿಸಲು ವಿಜ್ಞಾನಿಗಳಿಗೆ ಆದೇಶ

'ಚಿರಂಜೀವಿ'ಯಾಗಲು ಪುಟಿನ್ ಬಯಕೆ? ವೃದ್ಧಾಪ್ಯ ತಡೆಯುವ ತುರ್ತು ಔಷಧ ಸಿದ್ಧಪಡಿಸಲು ವಿಜ್ಞಾನಿಗಳಿಗೆ ಆದೇಶ
ಸತತ ಮೂರನೇ ಅವಧಿಗೆ ರಷ್ಯಾ ಅಧ್ಯಕ್ಷರಾಗಿರುವ 71 ವರ್ಷದ ವ್ಲಾಡಿಮಿರ್ ಪುಟಿನ್, ತಮ್ಮ ಸಾವಿನವರೆಗೂ ಅಧಿಕಾರದಲ್ಲಿ ಮುಂದುವರಿಯಲು ಬಯಸಿದ್ದಾರೆ. ಅದರ ಜತೆಗೆ ಸಾವನ್ನೂ ಮುಂದೂಡಲು ಸಹ ಬಯಸಿದ್ದಾರೆ. ಪುಟಿನ್ ಅವರಿಗೆ ಕ್ಯಾನ್ಸರ್ ಇದೆ, ಅವರ ದೈಹಿಕ ಹಾಗೂ ಮಾನಸಿಕ ಶಕ್ತಿ ಕುಂದುತ್ತಿದೆ ಎಂಬ ಪಾಶ್ಚಿಮಾತ್ಯ ದೇಶಗಳ ವರದಿಗಳ ನಡುವೆ, ತಮ್ಮ ವೃದ್ಧಾಪ್ಯವನ್ನು ಮುಂದೂಡಲು ಬಯಸಿದ್ದಾರೆ.
ರಷ್ಯಾದಲ್ಲಿ ಜನರ ಜೀವಿತಾವಧಿ ಕುಸಿಯುತ್ತಿರುವ ಆತಂಕಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಈ ಮಧ್ಯೆ ಪುಟಿನ್ ಅವರು ವೃದ್ಧಾಪ್ಯ ನಿಗ್ರಹಕ್ಕೆ ನೆರವಾಗುವ ಕ್ರಾಂತಿಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸುವ ಕಾರ್ಯವನ್ನು ತ್ವರಿತಗೊಳಿಸುವಂತೆ ರಷ್ಯಾ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ.
ಜೂನ್‌ನಲ್ಲಿ ಆರೋಗ್ಯ ಸಚಿವಾಲಯ ನೀಡಿದ್ದ ಸೂಚನೆಯು ಮೆಡುಜಾ ಮತ್ತು ಸಿಸ್ಟೆಮಾಗಳು ನಡೆಸಿದ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದ್ದು, ಮುಂಚೂಣಿ ವೈದ್ಯಕೀಯ ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ. ಸಂಶೋಧನಾ ಸಂಸ್ಥೆಗಳಿಗೆ ಪತ್ರ ಬರೆದಿರುವ ರಷ್ಯಾ ಆರೋಗ್ಯ ಸಚಿವಾಲಯ, ರಷ್ಯಾ ಜನತೆಯ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯೊಂದಿಗೆ ತುರ್ತಾಗಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ವೈದ್ಯರಿಗೆ ನಿರ್ದೇಶಿಸಿದೆ.
ದೀರ್ಘಾಯಸ್ಸು ಹಾಗೂ ವೃದ್ಧಾಪ್ಯದಲ್ಲಿ ಆರೋಗ್ಯದಿಂದ ಇರುವಂತೆ ನೆರವಾಗಲು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಸರ್ಕಾರದ ಉದ್ದೇಶವನ್ನು ರಷ್ಯಾ ಉಪ ಪ್ರಧಾನಿ ತಾತ್ಯನಾ ಗೋಲಿಕೊವ ಇತ್ತೀಚೆಗೆ ಬಹಿರಂಗಪಡಿಸಿದ್ದರು.
"ಮೇಲಿನ ಬಾಸ್ ಹೊಣೆಯೊಂದನ್ನು ನೀಡಿದ್ದಾರೆ. ಅದನ್ನು ಸಾಧ್ಯವಾದ ಎಲ್ಲ ರೀತಿಗಳಲ್ಲಿಯೂ ಜಾರಿಗೊಳಿಸಲು ಅಧಿಕಾರಿಗಳು ತರಾತುರಿಯಲ್ಲಿದ್ದಾರೆ. ನಮ್ಮ ಎಲ್ಲ ಸಂಶೋಧನೆಗಳನ್ನು ತುರ್ತಾಗಿ ಸಲ್ಲಿಸುವಂತೆ ನಮಗೆ ಸೂಚನೆ ನೀಡಲಾಗಿದೆ. ಇಂದು ಪತ್ರ ಕೈ ಸೇರಿದೆ. ಆದರೆ, ಅದರ ಪ್ರಕಾರ ಎಲ್ಲವನ್ನೂ ನಿನ್ನೆಯೇ ಕಳುಹಿಸಬೇಕಿತ್ತು. ಈ ರೀತಿಯದ್ದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಯಾವುದೇ ರಾಷ್ಟ್ರೀಯ ಯೋಜನೆ ಅಥವಾ ಕಾರ್ಯಕ್ರಮವು ವಿವಿಧ ಪರಿಣತರನ್ನು ಒಳಗೊಂಡ ಕೆಲವು ಸಭೆಗಳು ಮತ್ತು ಒಂದಷ್ಟು ಸಾರ್ವಜನಿಕ ಚರ್ಚೆಗಳನ್ನು ಒಳಗೊಂಡಿರುತ್ತವೆ. ಆದರೆ ಇದರಲ್ಲಿ ಯಾವ ಹಿನ್ನೆಲೆಯೂ ಇಲ್ಲ" ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






