ಮಾನವ ಕಳ್ಳಸಾಗಣೆ: ಅಪ್ರಾಪ್ತ ಬಾಲಕಿ ಮೇಲೆ 200ಕ್ಕೂ ಹೆಚ್ಚು ಮಂದಿಯಿಂದ ಅತ್ಯಾಚಾರ.!
ಮಹಾರಾಷ್ಟ್ರ: ಬಾಂಗ್ಲಾದೇಶ ಮೂಲದ 12 ವರ್ಷದ ಅಪ್ರಾಪ್ತ ಬಾಲಕಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಕ್ಕಿಬಿದ್ದು, ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಮಂದಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಭೀಕರ ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಆಕೆ, ಪೋಷಕರ ಭಯದಿಂದ ಪರಿಚಿತ ಮಹಿಳೆಯೊಂದಿಗೆ ಬಾಂಗ್ಲಾದೇಶ ತೊರೆದು ಭಾರತಕ್ಕೆ ನುಸುಳಿದ್ದಳು. ಭಾರತ ಪ್ರವೇಶಿಸಿದ ಬಳಿಕ ಮಾನವ ಕಳ್ಳಸಾಗಣೆ ಜಾಲದ ಬಲೆಗೆ ಸಿಕ್ಕಿದ್ದಾಳೆ. ನಿದ್ರಾಜನಕ ಪಾನೀಯ ಮತ್ತು ಚುಚ್ಚುಮದ್ದು ನೀಡಿ ಆಕೆಯನ್ನು ಪುರುಷರೊಡನೆ ಕಳುಹಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪಾಲ್ಘರ್‌ನಲ್ಲಿ ದಾಳಿ ನಡೆಸಿದ ಮೀರಾ-ಭಯಂದರ್ ವಸೈ-ವಿರಾರ್ (MBVV) ಪೊಲೀಸ್ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಜುಲೈ 26 ರಂದು ಬಾಲಕಿಯನ್ನು ಸೇರಿ ಇನ್ನೂ ನಾಲ್ವರು ಮಹಿಳೆಯರನ್ನು ರಕ್ಷಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ.
ರಿಮಾಂಡ್ ಹೋಂನಲ್ಲಿ ವೈದ್ಯಕೀಯ ಪರೀಕ್ಷೆಯ ವೇಳೆ, ಗುಜರಾತ್‌ನ ನಾಡಿಯಾಡ್‌ನಲ್ಲಿ ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ.
ಈ ಕಾರ್ಯಾಚರಣೆಗೆ ಎನ್‌ಜಿಒಗಳಾದ ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಹಾಗೂ ಹಾರ್ಮನಿ ಫೌಂಡೇಶನ್ ಸಹಕರಿಸಿವೆ. ಹಾರ್ಮನಿ ಫೌಂಡೇಶನ್ ಅಧ್ಯಕ್ಷ ಅಬ್ರಹಾಂ ಮಥಾಯ್ ಅವರು, “ಇದು ಮಾನವೀಯತೆಗೆ ವಿರುದ್ಧದ ಕ್ರೌರ್ಯ. ಬಾಲಕಿಯ ಬಾಲ್ಯವನ್ನು ಕಸಿದುಕೊಂಡಿದ್ದಾರೆ. ದೌರ್ಜನ್ಯ ಎಸಗಿದ ಎಲ್ಲಾ 200 ಮಂದಿಯನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?