Ajith Kumar: 8 ತಿಂಗಳಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡ ನಟ ಅಜಿತ್ ಕುಮಾರ್!

ಅಜಿತ್ ಅವರು 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ವೃತ್ತಿ ಜೀವನದಲ್ಲಿ ಏರಿಳಿತ ಇದೆ. ಅವರಿಗೆ ಇತ್ತೀಚೆಗೆ ಪದ್ಮಭೂಷಣ ಸಿಕ್ಕಿದೆ. ಅಜಿತ್ಗೆ ಕಾರ್ ರೇಸಿಂಗ್ ಹವ್ಯಾಸ ಇದೆ. ಅನೇಕ ಬಾರಿ ರೇಸಿಂಗ್ ತರಬೇತಿ ವೇಳೆ ಸಾವಿನಿಂದ ಪಾರಾಗಿ ಬಂದಿದ್ದಾರೆ.
ಇದೀಗ ಕೇವಲ 8 ತಿಂಗಳುಗಳಲ್ಲಿ ಬರೋಬ್ಬರಿ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 42 ಕೆಜಿ ಕಡಿಮೆ ಆಗುವುದು ಎಂದರೆ ತಮಾಷೆಯ ಮಾತಲ್ಲ. ಈ ಮೂಲಕ ಅಜಿತ್ ಕುಮಾರ್ ಅವರು ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ.
ಈ ಮೊದಲು ಅಜಿತ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಅವರ ದೇಹದ ತೂಕ ಹೆಚ್ಚುತ್ತಲೇ ಇತ್ತು. ಅಭಿಮಾನಿಗಳು ಕೂಡ ಈ ಬಗ್ಗೆ ಟೀಕೆ ಮಾಡಿದ್ದರು. ಅಜಿತ್ ಅವರು ಫಿಟ್ನೆಸ್ ಮತ್ತು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಫ್ಯಾನ್ಸ್ ಸಲಹೆ ನೀಡಿದ್ದರು. ಈಗ ಅಜಿತ್ ಸೂಪರ್ ಫಿಟ್ ಆಗಿದ್ದಾರೆ.
ಅಜಿತ್ ಅವರಿಗೆ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ಸುಲಭವಾಗಿ ಇರಲಿಲ್ಲ. ಅದಕ್ಕಾಗಿ ಅವರು ಸಾಕಷ್ಟು ಬದ್ಧತೆ ತೋರಿಸಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಿಂದ ಅವರು ಡಯೆಟ್ ಮತ್ತು ವ್ಯಾಯಾಮ ಶುರು ಮಾಡಿದರು. ಬಹಳ ಮುಖ್ಯವಾಗಿ, ಅಜಿತ್ ಅವರು ಮದ್ಯಪಾನ ತ್ಯಜಿಸಿದ್ದಾರೆ. ಅಲ್ಲದೇ ಮಾಂಸಾಹಾರ ಕೂಡ ನಿಲ್ಲಿಸಿದ್ದಾರೆ. ಅದರ ಫಲವಾಗಿ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತ ಬಂದರು.
‘ತುಂಬ ಫಿಟ್ ಆಗಿರಲು ಬೇಕಾದ ಎಲ್ಲ ಕ್ರಮಗಳನ್ನು ನಾನು ಕೈಗೊಳ್ಳುತ್ತಿದ್ದೇನೆ. ರೇಸಿಂಗ್ನಲ್ಲಿ ಇದು ಬಹಳ ಮುಖ್ಯ. ರೇಸಿಂಗ್ಗಾಗಿ ನಾನು ಪೂರ್ತಿ ಶ್ರಮ ಹಾಕಬೇಕು. ಅದನ್ನೇ ನಾನೀಗ ಮಾಡುತ್ತಿದ್ದೇನೆ’ ಎಂದು ಮಾಧ್ಯಮವೊಂದಕ್ಕೆ ಅಜಿತ್ ಕುಮಾರ್ ಅವರು ಹೇಳಿದ್ದಾರೆ. ಇತ್ತೀಚೆಗೆ ಅಜಿತ್ ಅವರು ಸಿನಿಮಾಗಿಂತಲೂ ರೇಸಿಂಗ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






