Asia Cup: ಇಂದು IND vs UAE ಮುಖಾಮುಖಿ: ಟೀಮ್ ಇಂಡಿಯಾದ ಪ್ಲೇಯಿಂಗ್ XI ಮೇಲೆ ಎಲ್ಲರ ಕಣ್ಣು!

ಸೆಪ್ಟೆಂಬರ್ 10, 2025 - 18:03
 0  22
Asia Cup: ಇಂದು IND vs UAE ಮುಖಾಮುಖಿ: ಟೀಮ್ ಇಂಡಿಯಾದ ಪ್ಲೇಯಿಂಗ್ XI ಮೇಲೆ ಎಲ್ಲರ ಕಣ್ಣು!

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಯುಎಇ ನಡುವೆ ಕಾದಾಟ ಜರುಗಲಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಸಲೀಸಾಗಿ ಗೆಲ್ಲುವ ನಿರೀಕ್ಷೆ ಇದೆ.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಂಗ್‌ಕಾಂಗ್ ವಿರುದ್ಧ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಸಾಧ್ಯತೆಗಳಿದ್ದರೂ, ಟಿ20 ಪಂದ್ಯಗಳಲ್ಲಿ ಯಾವುದೇ ತಂಡವನ್ನು ಕಡಿಮೆ ಅಂದಾಜಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಯುಎಇ, ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದಿರುವುದು ಗಮನ ಸೆಳೆಯುತ್ತಿದೆ.

ಪಂದ್ಯದಲ್ಲಿ ಭಾರತ ಯಾವ ಪ್ಲೇಯಿಂಗ್ 11ರೊಂದಿಗೆ ಕಣಕ್ಕಿಳಿಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಯುಎಇ ಸಾಮಾನ್ಯ ಮಟ್ಟದ ತಂಡವಾಗಿರುವುದರಿಂದ ಯುವಕರಿಗೆ ಅವಕಾಶ ನೀಡುವ ಸಾಧ್ಯತೆ ಇದ್ದರೂ, ದುಬೈ ಪಿಚ್ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಮುಖ ಆಟಗಾರರನ್ನು ಕಣಕ್ಕಿಳಿಸುವ ಸಾಧ್ಯತೆಗಳೂ ಇವೆ.

ಪಂದ್ಯ ಆರಂಭ, ನೇರಪ್ರಸಾರ: ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟವರ್ಕ್ಸ್​ನಲ್ಲಿ ನೋಡಬಹುದು. ಅಲ್ಲದೆ ಸೋನಿ ಲೀವ್​ನಲ್ಲಿ ಲೈವ್​ ಸ್ಪ್ರೀಮಿಂಗ್​ ಆಗಲಿದೆ.

ಭಾರತ- ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್.

ಯುಎಇ ತಂಡ: ಅಲಿಶನ್ ಷರೀಫ್, ಮೊಹಮ್ಮದ್ ವಾಸಿಮ್, ಮೊಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಮೊಹಮ್ಮದ್ ಫಾರೂಕ್, ಮೊಹಮ್ಮದ್ ರೋಹಿದ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್ ಸಿಂಗ್.

ಪಿಚ್ ರಿಪೋರ್ಟ್​: ದುಬೈ ಮೈದಾನದಲ್ಲಿ ಇದುವರೆಗೆ ನಡೆದ ಟಿ20 ಪಂದ್ಯಗಳಲ್ಲಿ ಬೌಲರ್‌ ಮತ್ತು ಬ್ಯಾಟ್ಸ್‌ಮನ್‌ಗಳ ನಡುವೆ ಸಮಾನ ಹೋರಾಟ ನಡೆದಿದೆ. ಸ್ಪಿನ್ನರ್‌ಗಳು ಇಲ್ಲಿ ಹೆಚ್ಚು ಲಾಭ ಪಡೆಯಲಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಸ್ಕೋರ್ 140ರಿಂದ 145 ರನ್‌. ಇದಲ್ಲದೆ, ಇಲ್ಲಿಯವರೆಗೆ ನಡೆದ 110 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 51 ಪಂದ್ಯಗಳನ್ನು ಗೆದ್ದರೆ, ಚೇಸಿಂಗ್​ ತಂಡಗಳು 58 ಪಂದ್ಯಗಳನ್ನು ಗೆದ್ದುಕೊಂಡಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow