ಬಾಳೆ ಹಣ್ಣುಗಳಿಗೆ ಮಾತ್ರವೇ 35 ಲಕ್ಷ ರೂ. ಖರ್ಚು: ಬಿಸಿಸಿಐಗೆ ಹೈಕೋರ್ಟ್ ನೋಟಿಸ್!
ಡೆಹ್ರಾಡೂನ್: ಉತ್ತರಾಖಂಡ ಕ್ರಿಕೆಟ್ ಸಂಸ್ಥೆ (CAU) ರಾಜ್ಯ ಸರ್ಕಾರದ ನಿಧಿಗಳನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆ ಉತ್ತರಾಖಂಡ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರು ಸಲ್ಲಿಸಿದ ದೂರು ಪ್ರಕಾರ, ಆಟಗಾರರಿಗೆ ಬಾಳೆ ಹಣ್ಣುಗಳಿಗೆ ಮಾತ್ರವೇ 35 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಲೆಕ್ಕ ಪರಿಶೋಧನಾ ವರದಿ ತಿಳಿಸಿದೆ. ಒಟ್ಟಾರೆ 12 ಕೋಟಿ ರೂ.ಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಡೆಹ್ರಾಡೂನ್ನ ಸಂಜಯ್ ರಾವತ್ ಮತ್ತು ಅವರ ಸಹಚರರು ಸಲ್ಲಿಸಿದ ಅರ್ಜಿಯ ಪ್ರಕಾರ, ಕ್ರಿಕೆಟ್ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೆಲವರು ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿದ್ದಾರೆ. ಆಹಾರ ಮತ್ತು ಇತರ ನೆಪದಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗ ಪಡಿಸಲಾಗಿದೆ. ಆದರೆ ರಾಜ್ಯದ ಆಟಗಾರರಿಗೆ ತಕ್ಕ ಮಟ್ಟದ ಸೌಲಭ್ಯ ಒದಗಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಆಡಿಟ್ ವರದಿ ಪ್ರಕಾರ, ಕಾರ್ಯಕ್ರಮ ನಿರ್ವಹಣಾ ಶುಲ್ಕಕ್ಕೆ 6.4 ಕೋಟಿ ರೂ., ಪಂದ್ಯಾವಳಿ ನಿರ್ವಹಣೆ, ಪ್ರಾಯೋಗಿಕ ಪಂದ್ಯಗಳು ಮತ್ತು ಇತರ ಅಗತ್ಯಗಳಿಗೆ 26.3 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಮೊತ್ತ ಹಿಂದಿನ ವರ್ಷದ ವೆಚ್ಚ (22.30 ಕೋಟಿ ರೂ.)ಗಿಂತ ಹೆಚ್ಚು.
ನಿಮ್ಮ ಪ್ರತಿಕ್ರಿಯೆ ಏನು?