Asia Cup 2025: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ? ಇಲ್ಲಿದೆ ಡೀಟೇಲ್ಸ್!

ಆಗಸ್ಟ್ 22, 2025 - 09:08
 0  19
Asia Cup 2025: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ? ಇಲ್ಲಿದೆ ಡೀಟೇಲ್ಸ್!

ಪಾಕಿಸ್ತಾನದೊಂದಿಗೆ ಭಾರತ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸುವುದಿಲ್ಲ, ಆದರೆ ಮುಂಬರುವ ಬಹು-ರಾಷ್ಟ್ರಗಳ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಗುರುವಾರ ತಿಳಿಸಿರುವುದಾಗಿ ವರದಿಯಾಗಿದೆ. ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿದ್ದು, ಈ ನಿರ್ಬಂಧವು ವಿಶ್ವಕಪ್‌ಗಳು ಮತ್ತು ಒಲಿಂಪಿಕ್ಸ್‌ನಂತಹ ಪಂದ್ಯಾವಳಿಗಳಿಗೆ ವಿಸ್ತರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

2025 ರ ಟಿ20 ಏಷ್ಯಾಕಪ್ ಬರುವ ಸೆಪ್ಟೆಂಬರ್ 9 ರಿಂದ ಯುಎಇಲ್ಲಿ ಆರಂಭವಾಗಲಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ  ನಡುವೆ ನಡೆಯಲಿದೆ. ಆದರೆ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವ ಕಾರಣ ಏಷ್ಯಾಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಹೊರಬಿದ್ದಿರುವ ತಾಜಾ ಮಾಹಿತಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಭಾರತ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದೆ

ವಾಸ್ತವವಾಗಿ ಪಾಕಿಸ್ತಾನಿ ಭಯೋತ್ಪಾದಕರು ಪಹಲ್ಗಾಮ್ ಮೇಲೆ ದಾಳಿ ಮಾಡಿ ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದರು. ಇದರ ನಂತರ, ಭಾರತ ಸರ್ಕಾರ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನದ ವಿರುದ್ಧ ಸಮರ ಸಾರಿತ್ತು. ಭಾರತದ ದಾಳಿಗೆ ನಲುಗಿದ್ದ ಪಾಕಿಸ್ತಾನ ಅಂತಿಮವಾಗಿ ಕದನ ವಿರಾಮಕ್ಕೆ ಮುಂದಾಯಿತು. ಇದಾದ ಬಳಿಕವೂ ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಹೀಗಾಗಿ ಉಭಯ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಕ್ರೀಡಾ ಸಚಿವಾಲಯ ಬದ್ಧವೈರಿಗಳ ಕಾಳಗಕ್ಕೆ ಹಸಿರು ನಿಶಾನೆ ತೋರಿಸಿದೆ.

ಪಿಟಿಐ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಈ ಹಿಂದೆಯಂತೆ ಇನ್ನು ಮುಂದೆಯೂ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಆದರೆ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈ ನಿಲುವನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ. ಪಾಕಿಸ್ತಾನದ ವಿಚಾರವಾಗಿ ಕ್ರೀಡಾ ಸಚಿವಾಲಯ ಹೊಸ ನೀತಿಯನ್ನು ಜಾರಿಗೆ ತಂದಿದೆ. ಕ್ರೀಡಾ ಸಚಿವಾಲಯದ ಈ ನೀತಿಯ ಪ್ರಕಾರ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ. ಅಲ್ಲದೆ, ಭಾರತ ತಂಡವು ಯಾವುದೇ ಪಂದ್ಯಾವಳಿ ಅಥವಾ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪಾಕಿಸ್ತಾನ ತಂಡಕ್ಕೂ ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಆದರೆ ಏಷ್ಯಾಕಪ್ ಬಹುರಾಷ್ಟ್ರೀಯ ಪಂದ್ಯಾವಳಿಯಾಗಿರುವುದರಿಂದ ನಾವು ಭಾರತ ಕ್ರಿಕೆಟ್ ತಂಡವನ್ನು ಅದರಲ್ಲಿ ಆಡುವುದನ್ನು ತಡೆಯುವುದಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow