Bangalore Swimming Pool: ಈಜುಕೊಳ ಪ್ರವೇಶ ದರ ಧಿಡೀರ್ ಏರಿಕೆ ಮಾಡಿದ BBMP: ಪೋಷಕರ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ದಿನದಿನಕ್ಕೆ ಏರುತ್ತಲೇ ಸಾಗಿದೆ. ಇಲ್ಲಿನ ಜನರು ಈಜುಕೊಳಕ್ಕೆ ಹೋಗಿ ಕೊಂಚ ಬಿಸಿಲಿನಿಂದ ಮುಕ್ತಿ ಪಡೆಯೋಣವೆಂದ್ರೆ, ಅಲ್ಲೂ ಶುಲ್ಕ ಏರಿಕೆಯ ಬಿಸಿ ಈಜುಪ್ರಿಯರಿಗೆ ತಟ್ಟಿದೆ. ಹೌದು ಬೇಸಿಗೆ ರಜೆ ಆರಂಭವಾಗಿರುವುದರಿಂದ ತಣ್ಣಗೆ ಕೆಲಕಾಲ ಈಜುಕೊಳದಲ್ಲಿ ಈಜಾಡಿ ಬರೋಣ ಅಂತ ಹೊರಡುವ ಮಕ್ಕಳಿಗೆ ಇದೀಗ ದರ ಏರಿಕೆಯ ಬಿಸಿ ತಟ್ಟುತ್ತಿದೆ.
ಸದ್ಯ ಪಾಲಿಕೆಯ ಈಜುಕೊಳಗಳಲ್ಲಿ 10 ವರ್ಷದ ಒಳಗಿನ ಮಕ್ಕಳಿಗೆ 35 ರೂಪಾಯಿ ಹಾಗೂ ವಯಸ್ಕರಿಗೆ 50 ರೂಪಾಯಿ ಅಂತ ದರ ನಿಗದಿ ಮಾಡಿ ಬೋರ್ಡ್ ಕೂಡ ಹಾಕಲಾಗಿದೆ. ಆದರೆ, ಇದೀಗ ಮಕ್ಕಳಿಗೂ ದೊಡ್ಡವರಷ್ಟೇ ಹಣ ಪಡೆಯುತ್ತಿರುವುದು ಪೋಷಕರ ಸಿಟ್ಟಿಗೆ ಕಾರಣವಾಗಿದೆ.
ಇನ್ನು, ಸಣ್ಣವರಿಗೆ ಮತ್ತು ದೊಡ್ಡವರಿಗೆ ಈಜುಕೊಳದಲ್ಲಿ ಈ ಮೊದಲು ಕಡಿಮೆ ದರ ಇತ್ತು. ಅರ್ಧದಿಂದ ಒಂದು ಗಂಟೆವರೆಗಿನ ಸಮಯಕ್ಕೆ ಈಜುಕೊಳಕ್ಕೆ ನಿಗಿದಿಪಡಿಸಿದ್ದ ದರವನ್ನು ಇದೀಗ ಬೇಕಾ ಬಿಟ್ಟಿಯಾಗಿ ಹೆಚ್ಚಿಸಲಾಗಿದೆ. ಇತ್ತ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸುಮಾರು 13 ಈಜುಕೊಳಗಳಿದ್ದು ಬಹುತೇಕ ಈಜುಕೊಳಗಳಲ್ಲಿ ಬೋರ್ಡ್ನಲ್ಲಿ ಬರೆದಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೇಸಿಗೆ ರಜೆ ಇರುವುದರಿಂದ ಈಜುಕೊಳಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಬಂಡವಾಳ ಮಾಡಿಕೊಂಡ ಪಾಲಿಕೆ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯುತ್ತಿರವುದು ಬೇಸಿಗೆ ರಜೆ ಮಜಾ ಅನುಭವಿಸಬೇಕಿದ್ದ ಮಕ್ಕಳಿಗೆ ನಿರಾಸೆ ತಂದಿಟ್ಟಿದೆ.
ನಿಮ್ಮ ಪ್ರತಿಕ್ರಿಯೆ ಏನು?






