Bigg Boss ಮನೆಯಲ್ಲಿ ಒಬ್ಬ ಅಪ್ಪನಿಗೆ ಹುಟ್ಟಿದ್ರೆ.. ಅಂದಿದ್ದ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್ ಕ್ಲಾಸ್!

ಈ ವಾರದ ಬಿಗ್ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್ ಬಹಳ ಗರಂ ಆಗಿತ್ತು. ಇವತ್ತಿನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಗುಡುಗಿದ್ದಾರೆ. ಈ ವಾರ ಅವರಿಗೆ ತುಸು ಹೆಚ್ಚೇ ಕೆಲಸ ಇದೆ. ಈ ವಾರ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಮನೆಯಲ್ಲಿ ದೊಡ್ಡ ಜಗಳವೇ ನಡೆದು ಇಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ.
ಇನ್ನೂ ಈ ವಾರ ಮಾತನಾಡುವ ಭರದಲ್ಲಿ ಚೈತ್ರಾ ಕುಂದಾಪುರ ಅವರ ಅಸಭ್ಯವಾದ ಪದಗಳನ್ನು ಬಳಕೆ ಮಾಡಿದ್ದರು. ‘ಒಬ್ಬ ಅಪ್ಪನಿಗೆ ಹುಟ್ಟಿದವನಾಗಿದ್ದರೆ..’ ಎಂದು ಜಗದೀಶ್ಗೆ ಚೈತ್ರಾ ಹೇಳಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಸುದೀಪ್ ಅವರು ಚೈತ್ರಾಗೆ ಗ್ರಹಚಾರ ಬಿಡಿಸಿದ್ದಾರೆ.
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಹಂಸಾ ಬಗ್ಗೆ ಮಾತನಾಡುವಾಗ ಅವಾಚ್ಯ ಪದಗಳನ್ನು ಬಳಸಿದ್ದರು. ಅದನ್ನು ಇಡೀ ಮನೆಯೇ ಖಂಡಿಸಿತ್ತು. ರಂಜಿತ್ ಅವರಂತೂ ಈ ವಿಚಾರಕ್ಕೆ ಜಗದೀಶ್ ಮೇಲೆ ಕೈ ಮಾಡಿ ಮನೆಯಿಂದ ಹೊರಬಂದಿದ್ದಾರೆ. ಜಗದೀಶ್ ಮಾಡಿದ ತಪ್ಪಿಗೆ ಅವರನ್ನು ಕೂಡ ಮನೆಯಿಂದ ಹೊರಗೆ ಕಳಿಸಲಾಗಿದೆ. ಜಗದೀಶ್ ಮಾತನಾಡಿದ್ದು ತಪ್ಪು ಎಂಬುದಾದರೆ ಇನ್ನುಳಿದ ಸದಸ್ಯರ ಮಾತು ಮತ್ತು ವರ್ತನೆ ಸರಿಯಿದೆಯಾ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.
‘ಹೆಣ್ಮಕ್ಕಳ ಬಗ್ಗೆ ಆ ರೀತಿ ಮಾತನಾಡಬೇಡಿ ಅಂತ ನೀವು ಹೇಳುತ್ತೀರಿ. ಹೌದಲ್ಲವೇ? ಅದಕ್ಕೆ ನಾನು ತುಂಬಾ ಗೌರವಿಸುತ್ತೇನೆ. ಆದರೆ ಮಹಿಳೆಯರು ಕೂಡ ಪುರುಷರನ್ನು ಗೌರವಿಸಬಾರದಾ? ನಿಮ್ಮಿಂದ ಒಂದು ಮಾತು ಬರುತ್ತದೆ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ. ನೀವು ಕೂಡ ಅವರ ತಾಯಿಗೆ ತಾನೇ ಬೈದಿದ್ದು. ಇದು ಹೇಗೆ ಸಾಧ್ಯ? ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಹೇಳಿದಾಗ ಯಾವ ನನ್ಮಗನೂ ಅಪ್ಪನಿಗೆ ಬೈಯ್ಯುತ್ತಿಲ್ಲ. ತಾಯಿಗೆ ಬೈಯುತ್ತಾ ಇರೋದು. ಹೆಣ್ಮಕ್ಕಳಿಗೆ ಗೌರವ ಕೊಡಿ ಅಂತ ನೀವು ಹೇಳ್ತೀರಾ?’ ಎಂದು ಸುದೀಪ್ ಅವರು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






