Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಘಟಾನುಘಟಿಗಳು

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳನ್ನು ಪ್ರಕಟಿಸಲು ಐಸಿಸಿ ಜನವರಿ 12 ವರೆಗೆ ಗಡುವು ನಿಗದಿಪಡಿಸಿದೆ. ಆದ್ದರಿಂದ ಟೂರ್ನಿಯಲ್ಲಿ ಆಡಲಿರುವ 8 ತಂಡಗಳು ಇನ್ನೇರಡು ದಿನಗಳಲ್ಲಿ ಪ್ರಕಟವಾಗಬೇಕಿದೆ. ಆದರೆ ಬಿಸಿಸಿಐ ಮಾತ್ರ ತನ್ನ ತಂಡವನ್ನು ಪ್ರಕಟಿಸಲು ಕೊಂಚ ಸಮಯಾವಕಾಶ ಕೇಳಬಹುದು ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಮುನ್ನಡೆಸಲಿದ್ದಾರೆ. ಇನ್ನು ಗಾಯದ ಕಾರಣ ಏಕದಿನ ಸರಣಿಗಳಿಂದ ಹೊರಗುಳಿದಿದ್ದ ಕೇನ್ ವಿಲಿಯಮ್ಸನ್, ಲಾಕಿ ಫರ್ಗುಸನ್ ಹಾಗೂ ಡೆವೊನ್ ಕಾನ್ವೆ ಈ ಟೂರ್ನಿಯ ಮೂಲಕ ತಂಡಕ್ಕೆ ಮರಳಲಿದ್ದಾರೆ.
ಈ ಮೂವರು ಕೊನೆಯ ಬಾರಿ ಏಕದಿನ ಪಂದ್ಯವಾಡಿದ್ದು 2023ರ ಏಕದಿನ ವಿಶ್ವಕಪ್ನಲ್ಲಿ. ಇದೀಗ ಒಂದು ವರ್ಷದ ಬಳಿಕ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೆ ಹಾಗೂ ಲಾಕಿ ಫರ್ಗುಸನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಹದಿನೈದು ಸದಸ್ಯರ ಈ ತಂಡದಲ್ಲಿ ಯುವ ಆಟಗಾರ ನಾಥನ್ ಸ್ಮಿತ್ಗೂ ಸ್ಥಾನ ನೀಡಲಾಗಿದೆ. ಇದರ ಜೊತೆ ಅದ್ಭುತ ಬೌಲಿಂಗ್ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ವಿಲಿಯಂ ಒರೋಕ್ ಅವರನ್ನು ಸಹ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಅದರಂತೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನ್ಯೂಝಿಲೆಂಡ್ ತಂಡ ಈ ಕೆಳಗಿನಂತಿದೆ…
ನ್ಯೂಝಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೊನ್ ಕಾನ್ವೆ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ವಿಲ್ ಯಂಗ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ನಾಥನ್ ಸ್ಮಿತ್, ಲಾಕಿ ಫರ್ಗುಸನ್, ಬೆನ್ ಸೀರ್ಸ್ , ವಿಲಿಯಂ ಒರೋಕ್, ಮ್ಯಾಟ್ ಹೆನ್ರಿ, ಮೈಕೆಲ್ ಬ್ರೇಸ್ವೆಲ್.
ನಿಮ್ಮ ಪ್ರತಿಕ್ರಿಯೆ ಏನು?






