Chinaದಲ್ಲಿ ಮತ್ತೆ ವೈರಸ್ ಆರ್ಭಟ..! HMPV ಸೋಂಕಿನ ಲಕ್ಷಣಗಳೇನು..? ಇಲ್ಲಿದೆ ಮಾಹಿತಿ

ಚೀನಾ ಇದೀಗ ಮತ್ತೊಮ್ಮೆ ವಿಶ್ವದ ಆತಂಕ ಹೆಚ್ಚಿಸಿದೆ. ಅಂದು ಚೀನಾದಲ್ಲಿ ಕೋವಿಡ್ ವೈರಸ್ ಸ್ಫೋಟಗೊಂಡಂತೆ ಇದೀಗ HMPV ವೈರಸ್ ಉಲ್ಬಣಿಸಿದೆ. ಹ್ಯೂಮನ್ ಮೆಟಾನ್ಯೂಮೋವೈರಸ್ ಹೆಸರಿನ ಹೊಸ ಸಾಂಕ್ರಾಮಿಕ ರೋಗದಿಂದ ಚೀನಾ ತತ್ತರಿಸಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದೆ. ಜನವರಿ ಆರಂಭದಲ್ಲಿ ಚೀನಾದಲ್ಲಿ HMPV ವೈರಸ್ ಸ್ಫೋಟಗೊಂಡಿದೆ. ಆಸ್ಪತ್ರೆಗಳು ಭರ್ತಿಯಾಗಿದೆ.
ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ.ಚೀನಾದಲ್ಲಿ 5 ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಚೀನಾದಲ್ಲಿ HMPV ವೈರಸ್ ಆತಂಕ ಭಾರತಕ್ಕೂ ತಟ್ಟಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಕ ಕೇಂದ್ರ(NCDC) ಚೀನಾದ HMPV ವೈರಸ್ ಮೇಲೆ ತೀವ್ರ ನಿಗಾವಹಿಸಿದೆ.
HMPV ವೈರಸ್ ಎಂದರೇನು?
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ನ್ಯುಮೊವಿರಿಡೆ ಕುಟುಂಬದೊಳಗೆ ಮೆಟಾಪ್ನ್ಯೂಮೊವೈರಸ್ ಕುಲಕ್ಕೆ ಸೇರಿದ ಆರ್‌ಎನ್‌ಎ ವೈರಸ್ ಆಗಿದೆ.
2001ರಲ್ಲಿ ಡಚ್ ಸಂಶೋಧಕರು ಮೊದಲು ಇದನ್ನು ಗುರುತಿಸಿದರು, ಉಸಿರಾಟದ ಸೋಂಕುಗಳನ್ನು ಅನುಭವಿಸುತ್ತಿರುವ ಮಕ್ಕಳ ಮಾದರಿಗಳನ್ನು ಅಧ್ಯಯನ ಮಾಡುವಾಗ ಈ ವೈರಸ್ ಅನ್ನು ಕಂಡುಹಿಡಿಯಲಾಯಿತು. ಈ ವೈರಸ್ ಕನಿಷ್ಠ ಆರು ದಶಕಗಳಿಂದ ಹರಡುತ್ತಿದ್ದು, ಈಗ ಜಾಗತಿಕವಾಗಿ ಪ್ರಚಲಿತ ಉಸಿರಾಟದ ರೋಗಕಾರಕ ಎಂದು ಗುರುತಿಸಲ್ಪಟ್ಟಿದೆ ಎಂದು ಸಂಶೋಧನೆಗಳು ಹೇಳುತ್ತವೆ.
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಲಕ್ಷಣಗಳು
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸಾಮಾನ್ಯ ಶೀತದ ಜೊತೆ ಕೆಮ್ಮು, ಜ್ವರದಂತಹ ಕರೋನ ವೈರಸ್ ರೋಗಲಕ್ಷಣಗಳನ್ನೇ ಹೊಂದಿದೆ.
ಕೋವಿಡ್ -19 ರ ಐದು ವರ್ಷಗಳ ನಂತರ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಏಕಾಏಕಿ ಚೀನಾದ ಹಲವು ಭಾಗಗಳಲ್ಲಿ ಹೆಚ್ಚುತ್ತಿದೆ, ಇದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಇದರ ಪರಿಣಾಮವಾಗಿ, ಅಧಿಕಾರಿಗಳು ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಕೈ ತೊಳೆಯುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸಲಹೆ ನೀಡ್ತಿದ್ದಾರೆ.
ಸೋಂಕು ಹರಡುವ ಬಗೆ
ಎಚ್‌ಎಂಪಿವಿ ಪ್ರಾಥಮಿಕವಾಗಿ ಕೆಮ್ಮುವಾಗ ಮತ್ತು ಸೀನುವಾಗ ಹೊರಹಾಕಲ್ಪಟ್ಟ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಪರಿಸರಕ್ಕೆ ಒಡ್ಡಿಕೊಳ್ಳುವುದರ ಮೂಲಕ ಸಹ ಹರಡಬಹುದು.
ಎಚ್ಎಂಪಿವಿಯ ಸೋಂಕಿನ ಅವಧಿಯು ಮೂರರಿಂದ ಐದು ದಿನಗಳು ಎಂದು ಚೀನೀ ಸಿಡಿಸಿ ವೆಬ್‌ಸೈಟ್ ಹೇಳುತ್ತದೆ. ಆದರೆ ಮತ್ತೆ ಸೋಂಕು ಅನುಭವಿಸಿದರೆ, ಇದು ಅಪಾಯಕಾರಿಯಾಗಬಹುದು. ವರ್ಷಪೂರ್ತಿ ಈ ಸೋಂಕು ಇರುತ್ತದೆಯಾದರೂ ಚಳಿಗಾಲದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿರುವ ಸೋಂಕಾಗಿದೆ.
ಯಾರಿಗೆ ಬೇಗ ಸೋಂಕು ತಗುಲುತ್ತದೆ?
ಇಂಥಾ ವಯಸ್ಸಿನವರಿಗೆ ಎಂದಿಲ್ಲವಾದರೂ, ಮಕ್ಕಳು ಮತ್ತು ವೃದ್ಧರರಿಗೆ ಈ ಸೋಂಕು ಬೇಗ ತಗುಲುತ್ತದೆ. ಈ ವೈರಸ್‌ನಿಂದ ಸುರಕ್ಷಿತವಾಗಿರಲು ವೈದ್ಯರು ಫೇಸ್ ಮಾಸ್ಕ್‌ಗಳನ್ನು ಧರಿಸಲು ಸಲಹೆ ನೀಡುತ್ತಾರೆ.
ಜನ ಹೆಚ್ಚು ಇರುವ ಕಡೆ ಹೋಗದಿರುವುದು ಉತ್ತಮ, ಅನಿವಾರ್ಯತೆ ಇದ್ದರೆ ಮಾಸ್ಕ್ ಧರಿಸಿ ಹೋಗಲು ಸಲಹೆ ನೀಡಲಾಗುತ್ತದೆ. ಆಗಾಗ್ಗೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






