CT Ravi: ಅವಾಚ್ಯ ಪದ ಬಳಕೆ ಕೇಸ್: ಸಿಟಿ ರವಿಗೆ ಮತ್ತೊಂದು ಸಂಕಷ್ಟ - ಸಿಐಡಿ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ!

ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಸದ್ಯ ಘಟನೆಗೆ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಅವರನ್ನು ಕೂಡಲೆ ಬಂಧನಮುಕ್ತ ಮಾಡುವಂತೆ ಆದೇಶಿಸಿತ್ತು.
ಇದೀಗ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು. ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ,
ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗುತ್ತೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ. ಸಿಟಿ ರವಿ ಪ್ರಕರಣವನ್ನ ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಸಿಟಿ ರವಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಕೆಲವೊಂದು ಕಾರಣಕ್ಕೆ ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡುತ್ತಾರೆ ಎಂದು ನಾವು ಇಲಾಖೆ ನಡೆಸಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






