IPL 2025: ಭಾರತ-ಪಾಕಿಸ್ತಾನ ಕದನ ವಿರಾಮ: IPL ಪುನರಾರಂಭಕ್ಕೆ ದಿನಾಂಕ ಫಿಕ್ಸ್..!
ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡಿದ್ದ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಆರಂಭಿಸಿ ಪಾಕಿಸ್ತಾನದ ಹುಟ್ಟಡಗಿಸಿತ್ತು. ಭಾರತವನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನ ನಾನಾ ರೀತಿಯ ಪ್ರಯತ್ನ ಮಾಡಿತ್ತಾದರೂ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಹೀಗಾಗಿ ಕೊನೆಗೂ ಭಾರತದ ಮುಂದೆ ಮಂಡಿಯೂರಿರುವ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಗಿದೆ.
ಇದೀಗ IPL ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಈ ವಾರದಲ್ಲೇ ಟೂರ್ನಿ ಮತ್ತೆ ನಡೆಯುವುದು ಬಹುತೇಕ ಖಚಿತವಾಗಿದೆ.
ಇನ್ನು ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದ್ದು, ಆದರೆ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯವನ್ನು ಮಾತ್ರ ಇತರೆಡೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಇದಕ್ಕೂ ಮುನ್ನ ಮೇ 9 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಯುದ್ಧ ಭೀತಿ ಹಿನ್ನಲೆಯಲ್ಲಿ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.
ಇದೀಗ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮರು ಆಯೋಜಿಸುವ ಮೂಲಕ ಐಪಿಎಲ್ಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಮುಂದಿನ ಗುರುವಾರ ಅಥವಾ ಶುಕ್ರವಾರದಿಂದ ಐಪಿಎಲ್ ಪುನರಾರಂಭವಾಗುವುದು ಬಹುತೇಕ ಖಚಿತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?