Mysore Dasara: ಮೈಸೂರು ದಸರಾ ಉದ್ಘಾಟನೆ ಮಾಡಿದ ʻಬೂಕರ್ʼ ವಿಜೇತೆ ಬಾನು ಮುಷ್ತಾಕ್
ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025ರ ಉದ್ಘಾಟನೆಯು ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ನಡೆಯಿತು. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಸ್ತಾಕ್ ಅವರು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು.ನವರಾತ್ರಿಯ ಮೊದಲ ದಿನ ಇಂದು ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ನಿರ್ಮಾಣವಾಗಿರುವ ಉದ್ಘಾಟನಾ ವೇದಿಕೆಗೆ ನಾಡ ಅಧಿದೇವತೆಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ವೇದಿಕೆಯಲ್ಲಿರುವ ಬೆಳ್ಳಿಯ ರಥಕ್ಕೆ ತಂದು ಕೂರಿಸಲಾಯಿತು. ಬಳಿಕ ಬೆಳಗ್ಗೆ 10:10 ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಗಣ್ಯರು ದೀಪ ಬೆಳಗಿಸಿ,
ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಗಣ್ಯರ ಮಾತು ಹಾಗೂ ಉದ್ಘಾಟಕರ ಬಾಷಣ. ನಂತರ ಮೈಸೂರು ನಗರದಲ್ಲಿ ವಿವಿಧ ದಸರಾ ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ. ಈ ಮಧ್ಯೆ ಬಾನು ಮುಷ್ತಾಕ್ ಅವರ ಬದುಕು-ಬರಹ ಪುಸ್ತಕ ಬಿಡುಗಡೆಯಾಗಲಿದೆ.
ದಸರಾ ಉದ್ಘಾಟನೆಗೂ ಮೊದಲು ಬಾನು ಮುಷ್ತಾಕ್ ಚಾಮುಂಡಿ ತಾಯಿ ಸನ್ನಿಧಿಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿದ್ದರು. ತಾಯಿಯ ಮಂಗಳಾರತಿ ಸ್ವೀಕರಿಸಿ, ಭಾವುಕರಾದರು. ಕಿತ್ತಳೆ ಹಾಗೂ ಹಸಿರು ಬಣ್ಣದ ಸೀರೆಯುಟ್ಟು ದೇವಸ್ಥಾನಕ್ಕೆ ಆಗಮಿಸಿದ ಅವರು, ಬಿಜೆಪಿ ನಾಯಕರ ವಿರೋಧದ ನಡುವೆಯೂ ತಮ್ಮ ಗೌರವವನ್ನು ಕಾಪಾಡಿಕೊಂಡು ಉದ್ಘಾಟನೆ ಮಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?