ನವರಾತ್ರಿ 2025 ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಯಾರು? ಇಲ್ಲಿದೆ ಆಕೆಯ ಮನ ಗೆಲ್ಲುವ ಮಂತ್ರ
ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ ನಡೆಸುವ ಸಂಪ್ರದಾಯವಿದೆ. ಈ ದಿನ ಭಕ್ತರು ರಂಗೋಲಿಯಲ್ಲಿ ಅಷ್ಟದಳ ಬಿಡಿಸಿ, ಕಲಶ ಸ್ಥಾಪನೆ ಮಾಡಿ, ದೇವಿಯನ್ನು ಆವಾಹನೆ ಮಾಡುತ್ತಾರೆ.
ಹಂಸವಾಹಿನಿಯಾಗಿ ಬಿಳಿ ಬಟ್ಟೆ ಹಾಗೂ ಬಿಳಿ ಹೂವಿನಿಂದ ಅಲಂಕೃತಳಾಗಿರುವ ಈ ಸ್ವರೂಪದ ದೇವಿ, ನಾಲ್ಕು ತೋಳುಗಳಲ್ಲಿ ಸೃಕ್, ಸೃವ, ಕಮಂಡಲ ಮತ್ತು ಜಪಮಾಲೆಯನ್ನು ಧರಿಸಿದ್ದಾಳೆ. ಆದ್ದರಿಂದ ಪೂಜೆಯಲ್ಲಿ ಶ್ವೇತ ಪುಷ್ಪಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ.
ಪುರಾಣಗಳ ಪ್ರಕಾರ, ಪರ್ವತರಾಜ ಹಿಮವಂತನ ಮಗಳಾದ ಈ ದೇವಿ, ಶಿವನನ್ನು ಪತಿಯಾಗಿ ಪಡೆಯಲು ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸು ನಡೆಸಿದರು. ಹಣ್ಣು-ಎಲೆಗಳಿಂದ ಬದುಕಿ, ನಂತರ ಬಿಲ್ವಪತ್ರಗಳನ್ನೂ ಬಿಟ್ಟು, ಕೊನೆಗೆ ಆಹಾರವನ್ನೇ ತ್ಯಜಿಸಿದ ಕಾರಣಕ್ಕೆ ಅವಳಿಗೆ ‘ಅಪರ್ಣಾ’ ಎಂದು ಹೆಸರಾಯಿತು. ತಾಯಿ ಮೇನಾ ಅವರ ಮನವಿಯಿಂದ ಅವಳಿಗೆ ‘ಉಮಾ’ ಎಂಬ ಹೆಸರಿನೂ ಪ್ರಚಾರವಾಯಿತು.
ಬ್ರಹ್ಮಚಾರಿಣಿ ದೇವಿಯ ಆರಾಧನೆಯಿಂದ ಅಶಕ್ತರು ಸಶಕ್ತರಾಗುತ್ತಾರೆ ಹಾಗೂ ಸಂಕಷ್ಟದಲ್ಲಿರುವವರಿಗೆ ಅನಿರೀಕ್ಷಿತ ಸಹಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಬೆಳಗಿನ ಪೂಜೆಯ ನಂತರ ಸಂಜೆ ವೇಳೆ ಮುತ್ತೈದೆಯರಿಗೆ ಅರಿಶಿನ-ಕುಂಕುಮ ಅಥವಾ ಬಾಗಿನ ನೀಡಿದರೆ ಪೂರ್ಣ ಫಲ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.
ಬ್ರಹ್ಮಚಾರಿಣಿ ಪೂಜೆ ವಿಧಾನ ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಕಲಶದ ಬಳಿ ಇರಿಸಬೇಕು. ಬಳಿಕ ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ ವಿಶೇಷವಾಗಿ ಮಲ್ಲಿಗೆ ಹೂ ಹಾಗೂ ಹೂವುಗಳನ್ನು ಅರ್ಪಿಸಬೇಕು. ತುಪ್ಪದ ದೀಪ ಬೆಳಗಿ ಶ್ರೀ ದುರ್ಗಾ ಸಪ್ತಶತಿಯನ್ನು ಓದಬೇಕು. ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೆ ಪಠಿಸಬೇಕು. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಭೋಗವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು.
ಬ್ರಹ್ಮಚಾರಿಣಿ ಪೂಜೆಯ ಫಲ ಬ್ರಹ್ಮಚಾರಿಣಿ ಅನಂತ ಫಲಗಳನ್ನು ನೀಡ್ತಾಳೆ. ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ. ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ. ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ. ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?