Namma Metro ಕಾಮಗಾರಿ ವೇಳೆ ದುರಂತ: ವಯಾಡೆಕ್ಟ್ ಪಿಲ್ಲರ್ ಬಿದ್ದು ಆಟೋ ಚಾಲಕ ಸಾವು! ಆಟೋ ಅಪ್ಪಚ್ಚಿ
ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಭೀಕರ ಅಪಘಾತ ಸಂಭವಿಸಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಖಾಸಿಂ ಮೃತ ಆಟೋ ಚಾಲಕ ಎಂದು ಗುರುತಿಸಲಾಗಿದೆ. ರಾತ್ರಿ ಮೆಟ್ರೋ ಕಾಮಗಾರಿಗೆಂದು ಲಾರಿಯಲ್ಲಿ ತರಲಾಗುತಿದ್ದ, ವಯಾಡೆಕ್ಟ್ ಕೆಳಗೆ ಬಿದಿದ್ದು,
ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಆಟೋ ಮೇಲೆ ಬಿದ್ದು, ಆಟೋ ಚಾಲಕ ಸಾವನಪ್ಪಿದ್ದಾರೆ. ಸರಿಸುಮಾರು ಮಧ್ಯರಾತ್ರಿ 12 ಗಂಟೆ ದುರಂತ ಸಂಭವಿಸಿದ್ದು, ಘಟನೆ ಬಳಿಕ ಕೊಂಚ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಘಟನೆ ಕಣ್ಣಾರೆ ಕಂಡ ಜನ ಆತನ ರಕ್ಷಣೆಗೆ ದಾವಿಸಿದ್ದರು. ಆದರೆ ಬೃಹತ್ ಗಾತ್ರದ ವಯಾಡೆಕ್ಟ್ ತೆಗೆಯಲು ಕ್ರೇನ್ ಅತ್ಯಗತ್ಯವಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದರೂ ಸಹ ಕ್ರೇನ್ ಮಾತ್ರ ಬರಲು ತಡವಾಯಿತು.
ಇದರಿಂದ ಆಕ್ರೋಶಗೊಂಡ ಜನ ಕಲ್ಲುತೂರಾಟ ಸಹ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಎರಡು ಗಂಟೆ ಬಳಿ ಕ್ರೇನ್ ತರಿಸಿ ವಯಾಡೆಕ್ಟ್ ಪಕ್ಕಕ್ಕೆ ಇಡುವ ಮೂಲಕ ಮೃತದೇಹ ಹೊರ ತೆಗೆಯಲಾಗಿದೆ. ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಮೆಟ್ರೋ ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?