S L ಭೈರಪ್ಪನವರ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಅಕ್ಷರ ಮಾಂತ್ರಿಕ, ಕಾದಂಬರಿಗಳ ಶಿಲ್ಪಿ ಎಸ್.ಎಲ್. ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ರವೀಂದ್ರ ಕಲಾಮಂದಿರದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, "ಬಿಜೆಪಿಯವರು ಸ್ಮಾರಕ ಮಾಡುವುದಿಲ್ಲ ಎಂದು ಹೇಳಿದ್ದರು.
ಆದರೆ ನಮ್ಮ ಸರ್ಕಾರ ಕ್ರಮ ಕೈಗೊಂಡು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದಿದ್ದರು. ಹೀಗಾಗಿ ಅಲ್ಲಿ ಸ್ಮಾರಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ," ಎಂದು ಸ್ಪಷ್ಟಪಡಿಸಿದರು.
"ಭೈರಪ್ಪ ಅವರು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು ಸಾಹಿತ್ಯ ಲೋಕದಲ್ಲಿ ಅಗಾಧ ಸಾಧನೆ ಮಾಡಿದವರು. ಬೋಧನೆ ಮಾಡುತ್ತಾ ಸಾಹಿತ್ಯದಲ್ಲೂ ತೊಡಗಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ, ಆದರೆ ಅವರಿಗೆ ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಇತ್ತು," ಎಂದು ಸಿಎಂ ಸ್ಮರಿಸಿದರು.
ಭೈರಪ್ಪ ಅವರು ಸುಮಾರು 25 ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಅನೇಕ ಕೃತಿಗಳು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. "ಇಷ್ಟು ಹೆಚ್ಚಿನ ಭಾಷಾಂತರ ಪಡೆದಿರುವ ಕನ್ನಡ ಬರಹಗಾರರಲ್ಲಿ ಅವರು ಅಗ್ರಸ್ಥಾನಿಗಳಾಗಿದ್ದಾರೆ. ತಮ್ಮ ಬರಹಗಳಿಂದ ಕನ್ನಡಕ್ಕೂ, ಇತರೆ ಭಾಷೆಗಳಿಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ," ಎಂದು ಸಿದ್ದರಾಮಯ್ಯ ದುಃಖ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?