Teachers Day: ಸೆಪ್ಟೆಂಬರ್ 5 ರಂದೇ ಶಿಕ್ಷಕರ ದಿನಾಚರಣೆ ಆಚರಿಸೋದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸೆಪ್ಟೆಂಬರ್ 5, 2025 - 07:01
 0  12
Teachers Day: ಸೆಪ್ಟೆಂಬರ್ 5 ರಂದೇ ಶಿಕ್ಷಕರ ದಿನಾಚರಣೆ ಆಚರಿಸೋದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿವರ್ಷದಂತೆ ಈ ವರ್ಷವು ಸಹ ನಮ್ಮೆಲ್ಲ ನೆಚ್ಚಿನ ಶಿಕ್ಷಕರನ್ನು ನೆನೆದು, ಅವರು ನಮಗೆ ನೀಡಿದ ಮಾರ್ಗದರ್ಶನ, ಶಿಕ್ಷಣ, ಕಲಿಸಿದ ನೈತಿಕ ಶಿಕ್ಷಣ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನ 'ಶಿಕ್ಷಕರ ದಿನ' ಬಂದಿದೆ. ಅದು ಸೆಪ್ಟೆಂಬರ್ 05.  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನ ಅಥವಾ ಶಿಕ್ಷಕ ದಿವಸ್ ಅನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿದ್ದರು ಮತ್ತು 1962 ರಿಂದ 1967 ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದರು.

ಈ ಸಮಯದಲ್ಲಿ ಅವರ ಸ್ನೇಹಿತರೆಲ್ಲರೂ ಸೇರಿಕೊಂಡು ರಾಧಾಕೃಷ್ಣನ್ ಅವರಿಗೆ ನಿಮ್ಮ ಹುಟ್ಟು ಹಬ್ಬವನ್ನು ದೊಡ್ಡ ಆಚರಣೆಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು ಎಂದು ಹೇಳಲಾಗುತ್ತದೆ.
 
ರಾಧಾಕೃಷ್ಣನ್ ಅವರು "ನನ್ನ ಜನ್ಮದಿನವನ್ನು ಆಚರಿಸುವ ಬದಲು, ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಏಕೆ ಆಚರಿಸಬಾರದು" ಎಂದು ಕೇಳಿದರಂತೆ. ಅವರ ಮಾತಿನ ಸ್ಪೂರ್ತಿಯಿಂದ ಅವತ್ತಿನಿಂದ ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವೆಂದು ಗುರುತಿಸಲಾಗಿದೆ.ಡಾ .ರಾಧಾಕೃಷ್ಣನ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯ ಮತ್ತು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ನಂತರ, ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಆಂಧ್ರ ವಿಶ್ವವಿದ್ಯಾಲಯ (BHU) ಎರಡರ ಉಪಕುಲಪತಿಯಾಗಿ ನೇಮಿಸಲಾಯಿತು.
 
ಅವರು 1939 ರಲ್ಲಿ ಬ್ರಿಟಿಷ್ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು. 1926, 1929 ಮತ್ತು 1930 ರಲ್ಲಿ ಅವರು ಆಕ್ಸ್‌ಫರ್ಡ್‌ನ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. ಅವರನ್ನು 1930 ರಲ್ಲಿ ತುಲನಾತ್ಮಕ ಧರ್ಮದಲ್ಲಿ ಶಿಕಾಗೋ ವಿಶ್ವವಿದ್ಯಾಲಯದ ಹ್ಯಾಸ್ಕೆಲ್ ಉಪನ್ಯಾಸಕ ಎಂದು ಹೆಸರಿಸಲಾಯಿತು.
ಫಿಲಾಸಫರ್ ಪ್ರೆಸಿಡೆಂಟ್ ಎಂದು ಖ್ಯಾತಿ ಗಳಿಸಿರುವ ರಾಧಾಕೃಷ್ಣನ್ ಅವರ ಎರಡು ಪ್ರಸಿದ್ಧ ಕೃತಿಗಳೆಂದರೆ 'ದಿ ಫಿಲಾಸಫಿ ಆಫ್ ರವೀಂದ್ರನಾಥ ಟ್ಯಾಗೋರ್' ಮತ್ತು 'ದಿ ರಿಜಿಯನ್ ಆಫ್ ರಿಲಿಜನ್ ಇನ್ ಕಾಂಟೆಂಪರರಿ ಫಿಲಾಸಫ ಎಂಬುವುಗಳಾಗಿವೆ.
 
ಇವರು 11 ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಲ್ಲದೆ, ಡಾ. ರಾಧಾಕೃಷ್ಣನ್ ಅವರಿಗೆ 1963 ರಲ್ಲಿ ಬ್ರಿಟಿಷ್ ಆರ್ಡರ್ ಆಫ್ ಮೆರಿಟ್ ನೀಡಲಾಯಿತು. ನಮ್ಮ ಶಿಕ್ಷಕರು ನಮಗೆ ಮಾಡಿದ ಅಪಾರ ತ್ಯಾಗವನ್ನು ಗೌರವಿಸಲು ಶಾಲೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಎಲ್ಲಾ ಶಿಕ್ಷಣ ಸಂಸ್ಥೆಗಳು ಈ ದಿನವನ್ನು ಪ್ರತಿ ವರ್ಷ 'ಶಿಕ್ಷಕರ ದಿನಾಚರಣೆ' ಎಂದು ಆಚರಿಸುತ್ತವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow