Waqf Act Amendment Bill: ಗದ್ದಲದ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ!

ನವದೆಹಲಿ: ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ವಿವಾದಿತ ವಕ್ಫ್ ಮಂಡಳಿ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಿದರು. ವಿರೋಧ ಪಕ್ಷಗಳು ಗಲಾಟೆ ಮಾಡಿದರೂ ಸಹ ಅದನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಕ್ಫ್ ಕಾಯ್ದೆಯನ್ನು ಮಂಡಿಸಿತು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್ ಮಂಡಳಿ ತಿದ್ದುಪಡಿ ಮಸೂದೆ, 2024 ಅನ್ನು ಮಂಡಿಸಿದ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ವಕ್ಫ್ ಬಿಲ್ ಮಂಡನೆ ಕುರಿತು ಎಂಟು ಗಂಟೆಗಳ ಕಾಲ ಚರ್ಚೆಗೆ ಅವಕಾಶ ನೀಡಿದರು. ಬಿಲ್ ಮಂಡನೆ ಆಗುತ್ತಿದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಸದ್ಯ ಸಂಸತ್ನಲ್ಲಿ ವಕ್ಫ್ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.
ಲೋಕಸಭೆಯಲ್ಲಿ ನಂಬರ್ ಲೆಕ್ಕಾಚಾರ
ಅಂದಹಾಗೆ, ಲೋಕಸಭೆಯಲ್ಲಿ ಯಾವುದೇ ಕಾಯ್ದೆ ಮಂಡನೆಗೆ ಬಹುಮತಕ್ಕೆ 272 ಸಂಸದರ ಬೆಂಬಲ ಅಗತ್ಯವಿದೆ. ಎನ್ಡಿಎ ಪ್ರಸ್ತುತ 293 ಸಂಸದರನ್ನು ಹೊಂದಿದ್ದು, ಇದರಲ್ಲಿ ಬಿಜೆಪಿಯ 240 ಸಂಸದರು ಸೇರಿದ್ದಾರೆ. ಇದಲ್ಲದೆ, ಜೆಡಿಯುನಿಂದ 12 ಸದಸ್ಯರು, ಟಿಡಿಪಿಯಿಂದ 16, ಎಲ್ಜೆಪಿಯಿಂದ 5, ಶಿವಸೇನೆ (ಶಿಂಧೆ ಬಣ) ದಿಂದ 7 ಮತ್ತು ಇತರ ಸಣ್ಣ ಮಿತ್ರಪಕ್ಷಗಳ ಸದಸ್ಯರಿದ್ದಾರೆ. ಈ ಸಂಖ್ಯೆ ಬಹುಮತಕ್ಕಿಂತ 21 ಹೆಚ್ಚು. ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು.
ಕಳೆದ ವರ್ಷ ಈ ಮಸೂದೆಯನ್ನು ಪರಿಚಯಿಸುವಾಗ, ಕೇಂದ್ರ ಸರ್ಕಾರವು ಅದನ್ನು ಎರಡು ಸದನಗಳ ಜಂಟಿ ಸಮಿತಿಗೆ ನೀಡಿತ್ತು. ಸಮಿತಿಯು ವರದಿಯನ್ನು ಸಲ್ಲಿಸಿದ ನಂತರ, ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಸಚಿವ ಸಂಪುಟವು ಮೂಲ ಮಸೂದೆಗೆ ಕೆಲವು ಬದಲಾವಣೆಗಳನ್ನು ತರಲು ಅನುಮೋದಿಸಿತು. ಸದ್ಯ ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಅವುಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವ ಮೂಲಕ ಮಸೂದೆಯು ಪ್ರಯತ್ನಿಸುತ್ತದೆ ಎಂದು ಸರ್ಕಾರ ಹೇಳಿದೆ.
ನಿಮ್ಮ ಪ್ರತಿಕ್ರಿಯೆ ಏನು?






