ಅಧಿಕಾರ ಹಂಚಿಕೆ ವಿಚಾರ: ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ: DK ಶಿವಕುಮಾರ್

ಅಕ್ಟೋಬರ್ 2, 2025 - 21:34
 0  18
ಅಧಿಕಾರ ಹಂಚಿಕೆ ವಿಚಾರ: ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ: DK ಶಿವಕುಮಾರ್

ಬೆಂಗಳೂರು:“ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದರು. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಅಧಿಕಾರ ಹಂಚಿಕೆ ವಿಚಾರವಾಗಿ ಮತ್ತೆ ಚರ್ಚೆ ಆರಂಭವಾಗುತ್ತಿವೆ ಎಂದು ಕೇಳಿದಾಗ, “ಯಾವ ಅಧಿಕಾರ ಹಂಚಿಕೆ ವಿಚಾರ ಇಲ್ಲ. ಈ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ. ಶಾಸಕ ರಂಗನಾಥ್ ಸೇರಿದಂತೆ ಈ ವಿಚಾರವಾಗಿ ಯಾರೆಲ್ಲಾ ಮಾತನಾಡಿದ್ದಾರೋ ಅವರಿಗೆ ನೋಟೀಸ್ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.

ಚಂದ್ರಶೇಖರ್ ಅವರಿಗೆ ಸೂಚಿಸಿದ್ದೇನೆ. ಈ ವಿಚಾರವಾಗಿ ಚರ್ಚೆ ಮಾಡಬಾರದು ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವು ಮಾಧ್ಯಮಗಳು ಬೇರೆ ರೀತಿ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿರುವ ಮಾತು ಅಂತಿಮ. ಅದರೆ ಮೇಲೆ ಈ ವಿಚಾರವಾಗಿ ಯಾರೂ ಚರ್ಚೆ ಮಾಡುವಂತಿಲ್ಲ” ಎಂದು ತಿಳಿಸಿದರು.

“ಯಾರು ಈ ವಿಚಾರವಾಗಿ ಚರ್ಚೆ ಮಾಡುತ್ತಾರೋ ಅವರು ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ, ನನ್ನ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ” ಎಂದು ಕಿಡಿಕಾರಿದರು.

ಇದಕ್ಕೂ ಮುನ್ನ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡಿರುವ ಶಿವರಾಮೇಗೌಡ, ಶಾಸಕ ರಂಗನಾಥ್ ಅವರಿಗೂ ನೋಟೀಸ್ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವಿಚಾರದಲ್ಲಿ ಮಾತನಾಡಿದರೆ ಜಿ.ಸಿ ಚಂದ್ರಶೇಖರ್ ಅವರಿಗೂ ನೋಟೀಸ್ ನೀಡುವಂತೆ ಹೇಳಿದ್ದೇನೆ. ನಮ್ಮಲ್ಲಿ ಶಿಸ್ತು ಇಲ್ಲವಾದರೆ ಪಕ್ಷ ಉಳಿಯುವುದಿಲ್ಲ” ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮವೇ ಎಂದು ಮತ್ತೆ ಕೇಳಿದಾಗ, “ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ. ಅವರ ಮಾತೇ ಅಂತಿಮ. ನಮಗೆ ಪಕ್ಷ ಮುಖ್ಯ. ಪಕ್ಷ ಹೇಳಿದಂತೆ ನಡೆಯುವ ಶಿಸ್ತಿನ ಸಿಪಾಯಿಗಳು ನಾವು” ಎಂದು ತಿಳಿಸಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow