ಅಬ್ಬಬ್ಬಾ.. 49 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಶ್ವಾನಪ್ರೇಮಿ..!

ಬೆಂಗಳೂರು: ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಬಹುತೇಕರು ಶ್ವಾನವನ್ನು ಮನೆಯಲ್ಲಿ ಸಾಕುತ್ತಾರೆ, ಮುದ್ದಿಸುತ್ತಾರೆ. ಕೆಲವರು ಶ್ವಾನಗಳ ಸಾಕಾಣಿಕೆಯನ್ನೇ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಹಲವು ತಳಿಯ ಶ್ವಾನಗಳನ್ನ ನಾವು ನೋಡುತ್ತೇವೆ. ಒಂದಕ್ಕಿಂತ ಒಂದು ದುಬಾರಿ ಬೆಲೆಯದ್ದು ಇವೆ.
ಈಗ ಎಸ್ ಸತೀಶ್ ಬೆಂಗಳೂರಿನ ಪ್ರಸಿದ್ಧ ಶ್ವಾನ ತಳಿಗಾರ. ಅವರು 150ಕ್ಕೂ ಹೆಚ್ಚು ವಿವಿಧ ತಳಿಗಳ ನಾಯಿಗಳನ್ನು ಹೊಂದಿದ್ದಾರೆ. ಇವರೀಗ ಕ್ಯಾಡಬಾಮ್ ಒಕಾಮಿ ಎಂಬ ಅಪರೂಪದ “ವುಲ್ಫ್ ಡಾಗ್”ಗಾಗಿ ಸುಮಾರು 50 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ. ಎಸ್ ಸತೀಶ್ ಅವರು 10 ವರ್ಷಗಳ ಹಿಂದೆ ನಾಯಿಗಳ ಸಾಕಣೆಯನ್ನು ನಿಲ್ಲಿಸಿದರು. ಆದರೆ ಈಗ ತಮ್ಮ ಅಪರೂಪದ ಸಾಕುಪ್ರಾಣಿಗಳನ್ನು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ.
ಅವರ ಸಂಗ್ರಹಕ್ಕೆ ಇತ್ತೀಚಿನ ಸೇರ್ಪಡೆಯಾದ ಒಕಾಮಿಯನ್ನು ಯುಎಸ್ನಲ್ಲಿ ಬೆಳೆಸಲಾಯಿತು. ಫೆಬ್ರವರಿಯಲ್ಲಿ ಭಾರತದಲ್ಲಿ ಬ್ರೋಕರ್ ಮೂಲಕ ಈ ನಾಯಿಯನ್ನು ಸತೀಶ್ ಅವರಿಗೆ ಮಾರಾಟ ಮಾಡಲಾಯಿತು. ಕೇವಲ 8 ತಿಂಗಳ ವಯಸ್ಸಿನ ನಾಯಿಮರಿಯಾದರೂ, ಈ ನಾಯಿ ಈಗಾಗಲೇ 75 ಕೆಜಿ ತೂಕವಿದ್ದು, 30 ಇಂಚು ಎತ್ತರವಿದೆ. ಸತೀಶ್ ಅವರು ಒಕಾಮಿಯನ್ನು “ತೋಳದಂತೆ ಕಾಣುವ” “ಅತ್ಯಂತ ಅಪರೂಪದ ನಾಯಿ ತಳಿ” ಎಂದು ಬಣ್ಣಿಸಿದ್ದಾರೆ. “ಈ ತಳಿಯನ್ನು ಈ ಹಿಂದೆ ಜಗತ್ತಿನಲ್ಲಿ ಮಾರಾಟ ಮಾಡಲಾಗಿಲ್ಲ” ಎಂದು ಅವರು ದಿ ಸನ್ಗೆ ತಿಳಿಸಿದ್ದಾರೆ.
ಒಕಾಮಿಯ ಮೂಲ ತಳಿಗಳಲ್ಲಿ ಒಂದಾದ ಕಕೇಶಿಯನ್ ಶೆಫರ್ಡ್ಸ್ ತಮ್ಮ ಶಕ್ತಿ ಮತ್ತು ರಕ್ಷಣಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾಗಿದೆ. ಈ ನಾಯಿಗಳು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ರಷ್ಯಾದ ಕೆಲವು ಭಾಗಗಳಂತಹ ಶೀತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ತೋಳಗಳಂತಹ ಪರಭಕ್ಷಕಗಳಿಂದ ಜಾನುವಾರುಗಳನ್ನು ರಕ್ಷಿಸಲು ಇವುಗಳನ್ನು ಹೆಚ್ಚಾಗಿ ಕಾವಲು ನಾಯಿಗಳಾಗಿ ಬಳಸಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






