ಕೇಂದ್ರ ಸಚಿವ HD ಕುಮಾರಸ್ವಾಮಿಗೆ ಬಿಗ್ ರಿಲೀಫ್: ಎಸ್ಐಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ!

ಬೆಂಗಳೂರು:- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ HD ಕುಮಾರಸ್ವಾಮಿಗೆ ಎಸ್ಐಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಎಸ್ಐಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜನವರಿ ತಿಂಗಳಲ್ಲಿ ಸರ್ಕಾರ ಅಕ್ರಮ ಭೂ ಒತ್ತುವರಿಗೆ ಆರೋಪ ಪ್ರಕರಣ ತನಿಖೆ ಮಾಡಲು ಎಸ್ಐಟಿ ರಚಿಸಿತ್ತು. ಹೀಗಾಗಿ ಎಸ್ಐಟಿ ರಚನೆ ಪ್ರಶ್ನಿಸಿ ಎಚ್ ಡಿ ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್ರ ಸಚಿವ HD ಕುಮಾರಸ್ವಾಮಿ ನಿರಾಳರಾಗಿದ್ದಾರೆ.
ಘಟನೆ ವಿವರ:
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ 2025ರ ಜನವರಿ 28ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, ಎಸ್ಐಟಿ ರಚನೆ ಮಾಡಿರುವುದು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






