ಇಂಡೋ -ಕಿವೀಸ್ ಟೆಸ್ಟ್ ಸಿರೀಸ್ಗೆ ಕೌಂಟ್ಡೌನ್: ಶತಕದ ಬರವನ್ನೂ ತೀರಿಸಿಕೊಳ್ತಾರಾ ಕೊಹ್ಲಿ..?
ಇಂಡೋ-ಕಿವೀಸ್ ಟೆಸ್ಟ್ ಸಿರೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಅಕ್ಟೋಬರ್ 16ರಿಂದ ಬೆಂಗಳೂರಿನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸರಣಿಗೆ ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ನಡೆಸಲಿದೆ. ಬಾಂಗ್ಲಾ ಸರಣಿ ಬಳಿಕ ವಿದೇಶಕ್ಕೆ ಹಾರಿದ್ದ ವಿರಾಟ್ ಕೊಹ್ಲಿ ಕೂಡ ನ್ಯೂಜಿಲೆಂಡ್ ಸರಣಿಗಾಗಿ ಲಂಡನ್ನಿಂದ ವಾಪಸ್ ಆಗಿದ್ದು, ಕಿವೀಸ್ ಸಂಹಾರಕ್ಕೆ ಸನ್ನದ್ಧರಾಗಿದ್ದಾರೆ.
ಹಿಂದಿನ ಬಾಂಗ್ಲಾ ಎದುರಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ವಿರಾಟ್, ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲೇ ಉಗ್ರಾವತಾರ ಪ್ರದರ್ಶಿಸೋ ಲೆಕ್ಕಾಚಾರದಲ್ಲಿದ್ದಾರೆ. ಕಮ್ಬ್ಯಾಕ್ ಕನವರಿಕೆಯಲ್ಲಿರುವ ವಿರಾಟ್, ತಮ್ಮ ಫೇವರಿಟ್ ಗ್ರೌಂಡ್ನಲ್ಲಿ ನ್ಯೂಜಿಲೆಂಡ್ಗೆ ವಿರಾಟರೂಪ ದರ್ಶನದ ಕನವರಿಕೆಯಲ್ಲಿದ್ದಾರೆ.
ವಿರಾಟ್ ಕೊಹ್ಲಿ ದೆಹಲಿ ಮೂಲದವ್ರೇ ಆಗಿದ್ರೂ, ಬೆಂಗಳೂರು 2ನೇ ತವರು ಮನೆ. 17 ವರ್ಷಗಳಿಂದ ಬೆಂಗಳೂರಿನ ಭಾಗವಾಗಿರುವ ವಿರಾಟ್ಗೆ, ಚಿನ್ನಸ್ವಾಮಿ ಅಂಗಳ ಫೇವರಿಟ್ ಸ್ಟ್ರೇಡಿಯಂ. ಆದ್ರೆ, ಈ ಫೇವರಿಟ್ ಸ್ಟೇಡಿಯಂನಲ್ಲಿ ಕಳೆದ 12 ವರ್ಷಗಳಿಂದ ಟೆಸ್ಟ್ನಲ್ಲಿ ರನ್ಗಳಿಸಲು ಕೊಹ್ಲಿ ಪರದಾಡಿದ್ದಾರೆ.
2012 ಆಗಸ್ಟ್ 31. ನ್ಯೂಜಿಲೆಂಡ್ ಎದುರಿನ ಕೊನೆ ಟೆಸ್ಟ್ ಪಂದ್ಯ. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ವಿರಾಟ್, 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ್ದರು. ಆ ಬಳಿಕ ವಿರಾಟ್, ಚಿನ್ನಸ್ವಾಮಿಯಲ್ಲಿ ಆಡಿರುವ 3 ಟೆಸ್ಟ್ಗಳಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ.
12 ವರ್ಷಗಳ ಮತ್ತದೇ ನ್ಯೂಜಿಲೆಂಡ್ ಎದುರು ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ರನ್ ಪ್ರವಾಹ ನಡೆಸುವ ಹಠದಲ್ಲಿರುವ ಕೊಹ್ಲಿ, ಚಿನ್ನಸ್ವಾಮಿಯ ಶತಕದ ಬರ ನೀಗಿಸಿಕೊಳ್ಳಲು ಪಣತೊಟ್ಟಿದ್ದಾರೆ. ಜೊತೆಗೆ ಟೆಸ್ಟ್ ವೃತ್ತಿ ಜೀವನದಲ್ಲಿ 1 ವರ್ಷ 2 ತಿಂಗಳಿಂದ ಎದುರಾಗಿರುವ ಶತಕದ ಬರವನ್ನೂ ತೀರಿಸಿಕೊಳ್ಳಲು ಹಂಬಲಿಸ್ತಿದ್ದಾರೆ.
ವಿರಾಟ್ ಕೊಹ್ಲಿಗೆ ಚಿನ್ನಸ್ವಾಮಿ ಅಂಗಳ ಮಾತ್ರವೇ ಫೇವರಿಟ್ ಗ್ರೌಂಡ್ ಆಗಿಲ್ಲ. ನ್ಯೂಜಿಲೆಂಡ್ ಕೂಡ ಫೇವರಿಟ್ ಎದುರಾಳಿ ತಂಡವಾಗಿದೆ. ಕಿವೀಸ್ ವಿರುದ್ಧ ರನ್ ಕೊಳ್ಳೆ ಹೊಡೆದಿದ್ದಾರೆ.
ನ್ಯೂಜಿಲೆಂಡ್ ಎದುರು 11 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್, 866 ರನ್ ಗಳಿಸಿದ್ದಾರೆ. 45.57ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿರುವ ಕೊಹ್ಲಿ 3 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?