ಇನ್ಮುಂದೆ ಹೊಟೇಲ್, ಉಪಾಹಾರ, ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಬ್ಯಾನ್!

ಬೆಂಗಳೂರು: ಪ್ಲಾಸ್ಟಿಕ್ ಬೇಡ ಎಂದು ಸರ್ಕಾರ ಹೇಳಿದ್ದರೂ ಸಹ ನಮ್ಮ ಮನೆಯಲ್ಲಿ ಇಂದಿಗೂ ಸಹ ಸಾಕಷ್ಟು ಪ್ಲಾಸ್ಟಿಕ್ ಉತ್ಪನ್ನಗಳು ನಮ್ಮ ಬಳಕೆಯಲ್ಲಿ ಈಗಲೂ ಇವೆ. ಆದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ಇವುಗಳು ಸಾಕಷ್ಟು ತೊಂದರೆದಾಯಕ ಎನ್ನುವುದಂತೂ ಸತ್ಯ.
ಇದೀಗ ಬೆಂಗಳೂರಿನ ವಿವಿಧೆಡೆಗಳಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳು ಪ್ರಯೋಗಾಲಯ ಪರೀಕ್ಷೆಯಲ್ಲಿ ಅಸುರಕ್ಷಿತ ಎಂಬುದು ದೃಢಪಟ್ಟ ಬೆನ್ನಲ್ಲೇ ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ. ಇನ್ಮುಂದೆ ಆಹಾರ ತಯಾರಿಕೆ, ವಿತರಣೆ ವೇಳೆ ಪ್ಲಾಸ್ಟಿಕ್ ಬಳಸಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿತ್ತು. ಅವುಗಳ ಪೈಕಿ 51 ಕಡೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವುಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಈ ಮೊದಲು ಹೋಟೆಲ್ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಕಡೆ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕಾರ್ಸಿನೋಜೆನಿಕ್ ಅಂಶ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






