ಕಲ್ಯಾಣ ಕರ್ನಾಟಕ ಭಾಗದ ಜನರು ಕೂಡ ನಮ್ಮ ಜೊತೆಗೆ ಇದ್ದಾರೆ: ನಿಖಿಲ್ ಕುಮಾರಸ್ವಾಮಿ

ಜುಲೈ 4, 2025 - 18:02
 0  11
ಕಲ್ಯಾಣ ಕರ್ನಾಟಕ ಭಾಗದ ಜನರು ಕೂಡ ನಮ್ಮ ಜೊತೆಗೆ ಇದ್ದಾರೆ: ನಿಖಿಲ್ ಕುಮಾರಸ್ವಾಮಿ

ಬೀದರ್: ಜೆಡಿಎಸ್ ಪಕ್ಷ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೇ ನಮ್ಮ ಜೊತೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರು ಕೂಡ ಇದ್ದಾರೆ ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಹೊರವಲಯದಲ್ಲಿರುವ (ಮೀನಕೇರಾ ಕ್ರಾಸ್) ವಿಜಯಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ಗುರುವಾರ ನಡೆದ, 'ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ' ಯಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜನರ ಹೋರಾಟದ ಫಲವಾಗಿ ಅನೇಕ ಚುನಾವಣೆಗಳಲ್ಲಿ ನಾವು ಶಾಸಕರನ್ನು ಪಡೆದಿದ್ದೇವೆ ಎಂದರು.

ಮುಂದೆ ಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕೂಡ ನಿಮ್ಮ ಸಹಕಾರ ನಮಗೆ ಬೇಕಾಗಿದೆ. ರಾಜ್ಯದ ಉದ್ದಗಲಕ್ಕೂ ನಾವು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಬೇಕಾಗಿದೆ. ನಾವು ಯಾವುದೇ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡ್ತಿಲ್ಲ. ಈಗಾಗಲೇ ನಾಲ್ಕು ಜಿಲ್ಲೆಯ 19 ತಾಲೂಕುಗಳ ಪ್ರವಾಸ ಮಾಡಿದ್ದೇನೆ. ನಾಳೆ ಮತ್ತು ನಾಡಿದು ಕಲಬುರಗಿ, ಯಾದಗಿರಿ ಪ್ರವಾಸ ಕೈಗೊಳ್ಳುತ್ತಿದ್ದೇನೆ.

ಉತ್ತರ ಕರ್ನಾಟಕ ಭಾಗದ ಯುವಕರು ಸಾರುತ್ತಿರುವ ಸಂದೇಶವನ್ನು ನಾನು ಗಮನಿಸಿದ್ದೇನೆ. ಜನತಾದಳ ಪಕ್ಷಕ್ಕೆ ರಾಜ್ಯದ 224 ಕ್ಷೇತ್ರಗಳಲ್ಲಿ ಕೂಡ ಮುಖಂಡರು, ಕಾರ್ಯಕರ್ತರು ಇದ್ದಾರೆ. ಮುಂದಿನ ದಿನಗಳಲ್ಲಿ ಜಿ.ಪಂ, ತಾ.ಪಂ, ಗ್ರಾಮ ಪಂಚಾಯತಿ ಚುನಾವಣೆಗಳನ್ನು ನೀವು ಮಾಡಬೇಕಾಗಿದೆ. ನಿಟ್ಟಿನಲ್ಲಿ ನೀವೆಲ್ಲರೂ ಕೆಲಸ ಮಾಡಬೇಕು. ನಾವು ಸ್ಥಳೀಯ ಚುನಾವಣೆಗಳಲ್ಲಿ ಹಿಡಿತ ಸಾಧಿಸಬೇಕಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಹಿಡಿತ ಸಾಧಿಸಿದರೇ ಮುಂಬರುವ ಚುನಾವಣೆಗಳು ನಮಗೆ ಕಷ್ಟವಾಗುವುದಿಲ್ಲ.

ಜನ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಜನರಿಗೆ ಒಲವು ಇದೆ. ನಮ್ಮ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟಿದ್ದಾರೆ. ನಾವು ಅವರ ವಿಶ್ವಾಸವನ್ನು ಹುಸಿಗೊಳಿಸುವುದಿಲ್ಲ. ಜನತಾದಳ ಪಕ್ಷದ ಕಾರ್ಯಕರ್ತರಿಗೆ ನಾಯಕರನ್ನು ಹುಟ್ಟು ಹಾಕುವ ಶಕ್ತಿ ಇದೆ ಎಂದು ನಿಖಿಲ್ ಕುಮಾರಸ್ವಾಮಿರವರು ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow