ಕೋಳಿ ಕೂಗಿನಿಂದ ನಿದ್ರೆಗೆ ಭಂಗ ಬರುತ್ತೆ ಎಂದು ಕೇಸ್ ದಾಖಲಿಸಿದ ಸ್ಥಳೀಯರು..!

ಬೆಳಗಿನ ಜಾವ ಪಕ್ಕದ ಮನೆಯ ಕೋಳಿ ಕೂಗಿ ನಿದ್ರೆಗೆ ತೊಂದರೆ ಮಾಡ್ತಿದೆ ಅಂತ ಸ್ಥಳೀಯರು ದೂರು ನೀಡಿದ್ದಾರೆ. ನೆರೆಯ ಕೋಳಿ ಶೆಡ್‌ನಲ್ಲಿರುವ ಕೋಳಿಗಳು ಬೆಳಗಿನ ಜಾವ ಜೋರಾಗಿ ಕೂಗುವುದರಿಂದ ನಮ್ಮ ನಿದ್ರೆಗೆ ಭಂಗ ಬರುತ್ತಿದೆ ಎಂದು ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕೋಳಿ ಶೆಡ್ ಸ್ಥಳಾಂತರಕ್ಕೆ ಆದೇಶ ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಲ್ಲಿಕ್ಕಲ್ ಗ್ರಾಮದ ಅನಿಲ್ ಕುಮಾರ್ ಎಂಬ ವ್ಯಕ್ತಿ, ತನ್ನ ಮನೆಯ ಟೆರೇಸ್ ಮೇಲೆ ಕೋಳಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದ. ಆದರೆ ಈ ಶೆಡ್‌ನಲ್ಲಿರುವ ಕೋಳಿಗಳು ದಿನಬೆಳಗಾದರೆ ಜೋರಾಗಿ ಕೂಗುವುದರಿಂದ, ತಮ್ಮ ನಿದ್ರೆಗೆ ಭಂಗ ಬರುತ್ತಿದೆ ಎಂದು ನೆರೆಮನೆಯ ರಾಧಾಕೃಷ್ಣ ಕುರುಪ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆದೂರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ನೆರೆಹೊರೆಯವರ ನಿದ್ರೆಗೆ ಭಂಗ ತರುತ್ತಿರುವ ಕೋಳಿ ಗೂಡನ್ನು ಈ ಕೂಡಲೇ ಸ್ಥಳಾಂತರ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 152ರ ಅಡಿಯಲ್ಲಿ, ಆದೂರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಈ ಆದೇಶವನ್ನು ಹೊರಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






