ಖಾತೆ ಮಾಡಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಡಿ: DCM ಡಿ.ಕೆ.ಶಿವಕುಮಾರ್
ಬೆಂಗಳೂರು: ಖಾತೆ ಮಾಡಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿಮ್ಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಸರ್ಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ" ಎಂದರು.
ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ" ಎಂದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಟನಲ್ ರಸ್ತೆ, ಎಲಿವೆಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಬಫರ್ ರಸ್ತೆ, ನಗರ ಸೌಂದರ್ಯ ಹೆಚ್ಚಿಸಲು ದೀಪಾಲಂಕಾರ, ಬೀದಿ ದೀಪಗಳಿಗೆ ಎಲ್ ಇಡಿ ಬಲ್ಬ್ ಅಳವಡಿಕೆ ಸೇರಿದಂತೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ 1.04 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ" ಎಂದರು.
ಜನರ ಬಳಿಗೆ ಸರ್ಕಾರವನ್ನು ಕರೆದೋಯ್ಯಬೇಕು ಎಂಬ ಕಾರಣಕ್ಕೆ ನಾವು ನಗರದಲ್ಲಿ ಐದು ಪಾಲಿಕೆ ರಚಿಸಿದ್ದೇವೆ. ನೀವು ಇಂದು ಕೊಟ್ಟಿರುವ ಅಹವಾಲು ಹಾಗೂ ಸಲಹೆಗಳನ್ನು ನಮ್ಮ ಅಧಿಕಾರಿಗಳು ದಾಖಲಿಸಿಕೊಂಡಿದ್ದು ಅವರು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನಿಮ್ಮ ಅಹವಾಲು ಏನೇ ಇದ್ದರು 1533 ಸಹಾಯವಾಣಿಗೆ ಕರೆ ಮಾಡಿ" ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?