ಮದುವೆ ಮಕ್ಕಳಾಟವಲ್ಲ: ಪತಿ-ಪತ್ನಿ ಹೊಂದಾಣಿಕೆ ಅಗತ್ಯ: ವಿಚ್ಛೇದನ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು: ಮದುವೆ ಎಂಬುದು ಕೇವಲ ಮಕ್ಕಳಾಟವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ವೈವಾಹಿಕ ಜೀವನದಲ್ಲಿ ಪತಿ ಮತ್ತು ಪತ್ನಿ ಪರಸ್ಪರ ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ ಎಂದು ತಿಳಿಸಿದೆ. ಪತ್ನಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಪತಿಯ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಪೀಠದ ಅಭಿಪ್ರಾಯ:
ನ್ಯಾಯಪೀಠವು, ಹಿಂದೂ ಧರ್ಮ ಮತ್ತು ಸಂಪ್ರದಾಯಗಳ ಪ್ರಕಾರ ಮದುವೆ ಎಂದರೆ ಪತಿ-ಪತ್ನಿಯ ಸಹಭಾಗಿತ್ವದ ಪವಿತ್ರ ಬಂಧ ಎಂದು ಹೇಳಿದೆ. “ಮದುವೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಲ್ಲಿ ಪರಸ್ಪರ ಸಹಕರಿಸುವ ನಂಬಿಕೆಯ ಮೇಲೆ ನಿರ್ಮಿತವಾದ ಬಾಂಧವ್ಯ. ಕೇವಲ ಆರೋಪ-ಪ್ರತ್ಯಾರೋಪಗಳ ಆಧಾರದ ಮೇಲೆ ಈ ಪವಿತ್ರ ಬಂಧವನ್ನು ಮುರಿಯಲು ಸಾಧ್ಯವಿಲ್ಲ,” ಎಂದು ಪೀಠ ಹೇಳಿದೆ.
ಆದೇಶದ ಪ್ರಮುಖ ಅಂಶಗಳು:
-
ಮೇಲ್ಮನವಿದಾರ ಪತಿಗೆ ಪತ್ನಿಗಿಂತ ಸೇವಕಿ ಅಗತ್ಯವಿದ್ದಂತೆ ಕಾಣುತ್ತದೆ. ಪತ್ನಿಯು ಪತಿಗೆ ವಿಧೇಯಳಾಗಿರಬೇಕು, ಚಿನ್ನಾಭರಣ ಧರಿಸಲು ಸಹ ಪತಿಯ ಅನುಮತಿ ಪಡೆಯಬೇಕಾಗಿತ್ತು ಎಂಬ ಅಂಶಗಳು ದಾಖಲೆಗಳಿಂದ ಸ್ಪಷ್ಟವಾಗಿವೆ ಎಂದು ಪೀಠ ಉಲ್ಲೇಖಿಸಿದೆ.
-
ಪತಿಯು ಪತ್ನಿಯೊಂದಿಗೆ ರಾಜಿ ಮತ್ತು ಹೊಂದಾಣಿಕೆ ತೋರಿಸಲು ವಿಫಲರಾಗಿದ್ದಾರೆ. ಈ ಕಾರಣದಿಂದಲೇ ವೈವಾಹಿಕ ಜೀವನದಲ್ಲಿ ಅಸಮಾಧಾನ ಉಂಟಾಗಿದೆ.
-
ವಿಚ್ಛೇದನಕ್ಕಾಗಿ ನೀಡಿರುವ ಕಾರಣಗಳು ಕ್ಷುಲ್ಲಕವಾಗಿದ್ದು, ಪರಸ್ಪರ ಚರ್ಚೆ ಮತ್ತು ಮಾತುಕತೆಯಿಂದ ಬಗೆಹರಿಸಬಹುದಾದವು.
ಪ್ರತಿವಾದಿ ಪರ ವಕೀಲರು ಪತ್ನಿಯು ಪತಿಯೊಂದಿಗೆ ನೆಲೆಸಲು ಸಿದ್ಧರಾಗಿದ್ದರೂ, ಸಿಂಗಾಪುರದಲ್ಲಿನ ಉದ್ಯೋಗವನ್ನು ತೊರೆಯಲು ಸಹ ಮುಂದಾಗಿದ್ದರು ಎಂದು ವಿವರಿಸಿದರು. ಆದರೆ, ಅಮೆರಿಕಾದಲ್ಲಿ ಪತಿ ಇದ್ದ ಕಾರಣ ಮೇಲ್ಮನವಿದಾರರು ಪತ್ನಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಅಗತ್ಯ ವೀಸಾ ವ್ಯವಸ್ಥೆ ಮಾಡುವುದಕ್ಕೂ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ, ಹೈಕೋರ್ಟ್ ಪೀಠವು ವಿಚ್ಛೇದನ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಪತಿ-ಪತ್ನಿ ಇಬ್ಬರೂ ಪರಸ್ಪರ ಸಹಕಾರದಿಂದ ವೈವಾಹಿಕ ಜೀವನವನ್ನು ಸುಧಾರಿಸಿಕೊಳ್ಳಬೇಕು ಎಂದು ಪೀಠ ಸಲಹೆ ನೀಡಿದೆ.
ನಿಮ್ಮ ಪ್ರತಿಕ್ರಿಯೆ ಏನು?