ಬೆಂಗಳೂರಿಗೆ ಹೊರಟಿದ್ದ ವೋಲ್ವೊ ಬಸ್ʼಗೆ ಬೆಂಕಿ: 20ಕ್ಕೂ ಹೆಚ್ಚು ಮಂದಿ ಸಜೀವ ದಹನ
ಕರ್ನೂಲ್ (Kurnool) ಜಿಲ್ಲೆಯ ಚಿನ್ನಟೇಕೂರು ಬಳಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ದುರಂತ ಸಂಭವಿಸಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ವೋಲ್ವೋ ಬಸ್ಸು ಬೆಂಕಿಗೆ ಆಹುತಿಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಕಾವೇರಿ ಟ್ರಾವೆಲ್ಸ್ಗೆ ಸೇರಿದ ವೋಲ್ವೋ ಬಸ್ಸಿನಲ್ಲಿ ಒಟ್ಟು 44 ಮಂದಿ ಪ್ರಯಾಣಿಕರು ಇದ್ದರು. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ವೇಗವಾಗಿ ಬಂದ ಬೈಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಬೈಕ್ ಬಸ್ಸಿನ ಕೆಳಭಾಗದಿಂದ ಮುಂದಕ್ಕೆ ಹೋಗಿ ಇಂಧನ ಟ್ಯಾಂಕ್ಗೆ ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.
ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿಕೊಂಡು ಪ್ರಯಾಣಿಕರಿಗೆ ಹೊರಬರುವ ಅವಕಾಶವೇ ಸಿಕ್ಕಿಲ್ಲ. ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯ ಕುರಿತು ಕರ್ನೂಲ್ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ಕೆಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?