ಚಿಕಿತ್ಸೆಗೆ ಬಂದ ರೋಗಿಯನ್ನು ಮದುವೆಯಾದ ಮನೋವೈದ್ಯೆ..! ನಂತರ ದಾರುಣ ಅಂತ್ಯ

ಆಗಸ್ಟ್ 9, 2025 - 21:00
 0  16
ಚಿಕಿತ್ಸೆಗೆ ಬಂದ ರೋಗಿಯನ್ನು ಮದುವೆಯಾದ ಮನೋವೈದ್ಯೆ..! ನಂತರ ದಾರುಣ ಅಂತ್ಯ

ಪತಿ ಹಾಗೂ ಅತ್ತೆ-ಮಾವನ ನಿರಂತರ ಕಿರುಕುಳದಿಂದ ಬೇಸತ್ತ 33 ವರ್ಷದ ಮನೋವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಸನತ್‌ನಗರ ಜೆಕ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಎ. ರಜಿತಾ ಎಂದು ಗುರುತಿಸಲಾಗಿದೆ.

ಮೃತೆಯ ತಂದೆ, ಸಬ್-ಇನ್ಸ್‌ಪೆಕ್ಟರ್ ನರಸಿಂಹ ಗೌಡ್ ನೀಡಿದ ದೂರಿನ ಆಧಾರದ ಮೇಲೆ ಸಂಜೀವ ರೆಡ್ಡಿ ನಗರ ಪೊಲೀಸರು ಪತಿ ರೋಹಿತ್, ಅತ್ತೆ-ಮಾವ ಕಿಷ್ಟಯ್ಯ ಮತ್ತು ಸುರೇಖಾ, ಸಹೋದರ ಮೋಹಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ರಜಿತಾ, ಬಂಜಾರಾ ಹಿಲ್ಸ್‌ನ ಮಾನಸಿಕ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ವೇಳೆ ರೋಗಿಯಾಗಿ ಬಂದಿದ್ದ ರೋಹಿತ್‌ನ್ನು ಭೇಟಿಯಾದರು. ಕೌನ್ಸೆಲಿಂಗ್ ಬಳಿಕ ರೋಹಿತ್ ಚೇತರಿಸಿಕೊಂಡು, ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ನಂತರ ಇಬ್ಬರೂ ಪ್ರೀತಿಸಿ ಮದುವೆಯಾದರು.

ಆದರೆ, ಮದುವೆಯ ನಂತರ ರೋಹಿತ್ ಕೆಲಸ ನಿಲ್ಲಿಸಿ, ರಜಿತಾಳ ಸಂಬಳವನ್ನು ಪಾರ್ಟಿಗಳು ಮತ್ತು ವೈಯಕ್ತಿಕ ಖರ್ಚುಗಳಿಗೆ ಬಳಸುತ್ತಿದ್ದನು. ಹಣ ನೀಡಲು ನಿರಾಕರಿಸಿದಾಗ, ಅವಳಿಗೆ ದೈಹಿಕ ಹಲ್ಲೆ ನಡೆಸುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ.

ನಿರಂತರ ಕಿರುಕುಳದಿಂದ ಬೇಸತ್ತ ರಜಿತಾ, ಜುಲೈ 16ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು, ಗುಣಮುಖವಾಗಿ ಮನೆಗೆ ಮರಳಿದ್ದರು. ಆದರೆ ಜುಲೈ 28ರಂದು, ನಾಲ್ಕನೇ ಮಹಡಿಯ ಸ್ನಾನಗೃಹದ ಕಿಟಕಿಯಿಂದ ಹಾರಿ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿದರು.

ತಲೆಗೆ ತೀವ್ರ ಗಾಯಗೊಂಡು ಅಮೀರ್‌ಪೇಟೆಯ ಆಸ್ಪತ್ರೆಗೆ ದಾಖಲಾದ ಅವರು, ವೈದ್ಯಕೀಯ ಪರೀಕ್ಷೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಯಿತು. ರಜಿತಾ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಪ್ರಕರಣದ ತನಿಖೆ ಮುಂದುವರಿದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow