ಶ್ರೀಲೀಲಾ ಬದಲಿಗೆ ಮತ್ತೋರ್ವ ಕನ್ನಡ ನಟಿ..!? ಅಜಿತ್ ಹೊಸ ಸಿನಿಮಾದ ನಾಯಕಿ ಯಾರು..?
ನಟ ಅಜಿತ್ ಕುಮಾರ್ ಅಭಿನಯದ ಇತ್ತೀಚಿನ ಸಿನಿಮಾ ಗುಡ್ ಬ್ಯಾಡ್ ಅಗ್ಲಿ ಏಪ್ರಿಲ್ 10ರಂದು ಬಿಡುಗಡೆಯಾಯಿತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ, ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಅಜಿತ್ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸಿದ್ದು, ತ್ರಿಶಾ ಕೃಷ್ಣನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಜಿತ್ ಅವರ ಮುಂದಿನ ಚಿತ್ರಕ್ಕೂ ಅಧಿಕ್ ರವಿಚಂದ್ರನ್ ನಿರ್ದೇಶನ ವಹಿಸುತ್ತಿದ್ದು, ನಾಯಕಿಯರ ಆಯ್ಕೆ ಕುರಿತು ಚಿತ್ರರಂಗದಲ್ಲಿ ಚರ್ಚೆ ಜೋರಾಗಿದೆ. ವೈರಲ್ ಆಗಿರುವ ಮಾಹಿತಿಯ ಪ್ರಕಾರ, ನಟಿ ಶ್ರೀಲೀಲಾ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗುತ್ತಾರೆ ಎಂದು ತಿಳಿದುಬಂದಿತ್ತು. ಆದರೆ, ಈ ಪಾತ್ರ ಶ್ರೀನಿಧಿ ಶೆಟ್ಟಿಗೆ ಹೋಗಿದೆ ಎಂಬ ವರದಿಗಳೂ ಹರಿದಾಡುತ್ತಿವೆ. ಈ ಕುರಿತು ಅಧಿಕೃತ ಘೋಷಣೆ ಆಗಸ್ಟ್ 2025ರ ಅಂತ್ಯದ ವೇಳೆಗೆ ಹೊರಬೀಳುವ ನಿರೀಕ್ಷೆಯಿದೆ.
ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅಜಿತ್ ಜೊತೆಗೆ ಅವರ ಹೊಸ ಸಿನಿಮಾ ದೊಡ್ಡ ಯಶಸ್ಸು ಪಡೆಯಲಿದೆ ಎಂಬ ನಿರೀಕ್ಷೆಯಿದೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಅಜಿತ್ ಮತ್ತು ಅನಿರುದ್ಧ್ ಈಗಾಗಲೇ ವಿದಮುಯರ್ಚಿ, ವಿವೇಗಂ ಮತ್ತು ವೇದಾಲಂ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.
ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದು, ಈ ಪಾತ್ರಕ್ಕೆ ಮೊದಲು ಶ್ರೀಲೀಲಾ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅಂತಿಮವಾಗಿ ಪ್ರಿಯಾ ಆಯ್ಕೆಯಾಗಿದ್ದರು. ಈಗ ಅಜಿತ್ ಹೊಸ ಸಿನಿಮಾದಲ್ಲಿ ಕೂಡ ಶ್ರೀಲೀಲಾ ಬದಲಿಗೆ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಮತ್ತು ಕೆಜಿಎಫ್ 2 ಬಳಿಕ ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅಜಿತ್ ಜೊತೆ ಅವರ ಜೋಡಿ ಹೇಗಿರುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಿದೆ. ಈ ಬಗ್ಗೆ ತಂಡದಿಂದ ಅಧಿಕೃತ ಮಾಹಿತಿ ಬರುವುದನ್ನು ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?