ತೆರಿಗೆದಾರರಿಗೆ ಗುಡ್ ನ್ಯೂಸ್: ಟ್ಯಾಕ್ಸ್ ಆಡಿಟ್ ಗಡುವನ್ನು ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ!
ನವದೆಹಲಿ: ಟ್ಯಾಕ್ಸ್ ಆಡಿಟ್ ರಿಪೋರ್ಟ್ (TAR – Tax Audit Report) ಸಲ್ಲಿಕೆಗೆ ನೀಡಲಾಗಿದ್ದ ಸೆಪ್ಟೆಂಬರ್ 30ರ ಗಡುವು ಒಂದು ತಿಂಗಳು ವಿಸ್ತರಿಸಲಾಗಿದೆ. ಇದೀಗ ಅಕ್ಟೋಬರ್ 31ರವರೆಗೆ ಟಿಎಆರ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಬಿಡಿಟಿ (CBDT) ಘೋಷಿಸಿದೆ.
ಈ ನಿರ್ಧಾರವನ್ನು ರಾಜಸ್ಥಾನ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಕೈಗೊಂಡಿದೆ. ಹಲವು ಚಾರ್ಟರ್ಡ್ ಅಕೌಂಟೆಂಟ್ ಸಂಘಟನೆಗಳು ಮತ್ತು ತೆರಿಗೆ ಪಾವತಿದಾರರ ಪ್ರತಿನಿಧಿಗಳು ಸಿಬಿಡಿಟಿಗೆ ಮನವಿ ಸಲ್ಲಿಸಿ, ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳಿಂದ ವ್ಯವಹಾರ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಿದೆ, ಆಡಿಟ್ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ ಎಂದು ವಾದಿಸಿದ್ದರು.
ಇದಕ್ಕೂ ಮುನ್ನ, ಸಿಬಿಡಿಟಿ ಇ-ಫೈಲಿಂಗ್ ಪೋರ್ಟಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದರೂ, ಅದನ್ನು ಸಿಬಿಡಿಟಿ ತಳ್ಳಿಹಾಕಿದೆ. ಪೋರ್ಟಲ್ನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ, ಟಿಎಆರ್ ಅಪ್ಲೋಡ್ ಪ್ರಕ್ರಿಯೆ ಸರಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.
ಸಿಬಿಡಿಟಿ ಪ್ರಕಾರ, ಸೆಪ್ಟೆಂಬರ್ 24ರಂದು ಒಂದೇ ದಿನ 60,000ಕ್ಕೂ ಹೆಚ್ಚು ಟಿಎಆರ್ಗಳು ಅಪ್ಲೋಡ್ ಆಗಿವೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಟ್ಯಾಕ್ಸ್ ಆಡಿಟ್ ರಿಪೋರ್ಟ್ಗಳು ಸಲ್ಲಿಕೆಯಾಗಿದೆ. ಅದೇ ವೇಳೆ, ಸೆಪ್ಟೆಂಬರ್ 23ರವರೆಗೂ 7.57 ಕೋಟಿಗೂ ಅಧಿಕ ಐಟಿ ರಿಟರ್ನ್ಗಳು ಸಲ್ಲಿಕೆ ಆಗಿವೆ ಎಂದು ಮಾಹಿತಿ ನೀಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?