ದಿವ್ಯಾ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಕೇಸ್! ಕಾರ್ ನಿಲ್ಲಿಸದೆಯೇ ಮಾಜಿ ಬಿಗ್ ಬಾಸ್ ಸ್ಪರ್ಧಿ ಪರಾರಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ವಿರುದ್ಧ ಈಗ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 4ರ ರಾತ್ರಿ ಸುಮಾರು 1:30ಕ್ಕೆ ಬ್ಯಾಟರಾಯನಪುರದ ಎಂ.ಎಂ. ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಿವ್ಯಾ ಸುರೇಶ್ ಚಾಲನೆ ಮಾಡುತ್ತಿದ್ದ ಕಾರು ಒಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಕಿರಣ್, ಅನುಷಾ ಮತ್ತು ಅನಿತಾ ಎಂಬ ಮೂವರು ಮಹಿಳೆಯರು ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿ ನಾಯಿಗಳನ್ನು ಕಂಡು, ಭಯದಿಂದ ಬೈಕ್ ಸ್ವಲ್ಪ ಬಲಕ್ಕೆ ತಿರುಗಿದೆ. ಅಷ್ಟರಲ್ಲಿ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ನೆಲಕ್ಕುರುಳಿದ್ದು, ಅನಿತಾ ಅವರ ಕಾಲಿನ ಮಂಡಿ ಚಿಪ್ಪಿಗೆ ಗಾಯವಾಗಿದೆ. ಘಟನೆಯ ನಂತರ ದಿವ್ಯಾ ಸುರೇಶ್ ಕಾರು ನಿಲ್ಲಿಸದೇ ಅಲ್ಲಿಂದ ತೆರಳಿದ್ದಾರೆ ಎಂದು ದೂರುದಾರ ಕಿರಣ್ ಆರೋಪಿಸಿದ್ದಾರೆ.
ಗಾಯಾಳು ಅನಿತಾ ಸಂಬಂಧಿ ಕಿರಣ್ ಅಕ್ಟೋಬರ್ 7ರಂದು ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ದಿವ್ಯಾ ಸುರೇಶ್ ಕಾರಿನ ನಂಬರ್ ಟ್ರೇಸ್ ಮಾಡಿ, ಅವರನ್ನು ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ. ನಂತರ ಪೊಲೀಸರು ಕಾರನ್ನು ಪತ್ತೆಹಚ್ಚಿ ಸೀಜ್ ಮಾಡಿದ್ದಾರೆ.
ವರದಿಗಳ ಪ್ರಕಾರ, ದಿವ್ಯಾ ಸುರೇಶ್ ನಂತರ ತಮ್ಮ ಕಾರು ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ಸಾಕ್ಷ್ಯ ಸಂಗ್ರಹಣೆ ನಡೆಸುತ್ತಿದ್ದು, ದಿವ್ಯಾ ಸುರೇಶ್ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಮುಂದುವರಿದಿದೆ. ದಿವ್ಯಾ ಸುರೇಶ್ ಕನ್ನಡ ಚಿತ್ರರಂಗದ ನಟಿಯಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಸಿಸಿಟಿವಿ ಮೂಲಕ ಕಾರಿನ ನಂಬರ್ ಟ್ರೇಸ್ ಮಾಡಿದ್ದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ದಿವ್ಯಾ ಸುರೇಶ್‌ರನ್ನು ಕರೆಸಿ, ಕಾರನ್ನು ಸೀಜ್ ಮಾಡಿದ್ದರು. ಆದರೆ ರಾತ್ರೋ ರಾತ್ರಿ ನಟಿ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?