ನಟ ಉಪೇಂದ್ರ, ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿ ಹಣ ಕಳೆದುಕೊಂಡಿದ್ದು ಹೇಗೆ..? ಇಲ್ಲಿದೆ ಮಾಹಿತಿ
ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ಸೈಬರ್ ಖದೀಮರ ಬಲೆಗೆ ಸಿಲುಕಿದ್ದಾರೆ. ಇಬ್ಬರ ಮೊಬೈಲ್ ಹ್ಯಾಕ್ ಆಗಿ, ಅವರ ಪರಿಚಯದವರಿಗೆ ವಾಟ್ಸಪ್ ಮೂಲಕ ಹಣ ಕೇಳುವ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಮೋಸಕ್ಕೆ ಸ್ವತಃ ಉಪೇಂದ್ರ ಅವರ ಮಗ ಆಯುಷ್ ಕೂಡ ಬಲಿಯಾಗಿ, 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಉಪೇಂದ್ರ, ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.
"ಪ್ರಿಯಾಂಕಾಗೆ ಅಜ್ಞಾತ ನಂಬರ್‌ನಿಂದ ಕರೆ ಬಂದು, ಸ್ಟಾರ್ ಹಾಗೂ ಹ್ಯಾಶ್ ಇರುವ ನಂಬರ್‌ಗೆ ಕರೆಮಾಡುವಂತೆ ಹೇಳಿದ್ದಾರೆ. ಬಳಿಕ ನನ್ನ ಹಾಗೂ ಮ್ಯಾನೇಜರ್ ಮಾದೇವ ಅವರ ಫೋನ್‌ನಿಂದ ಪ್ರಯತ್ನಿಸಿದ್ದರಿಂದ ಮೂರು ಫೋನ್ಗಳು ಹ್ಯಾಕ್ ಆಗಿವೆ," ಎಂದು ಉಪೇಂದ್ರ ಹೇಳಿದ್ದಾರೆ.
"ಹ್ಯಾಕ್ ಆದ ಬಳಿಕ ನಮ್ಮ ಫೋನಿನಿಂದ ಪರಿಚಿತರಿಗೆ ಮೆಸೇಜ್ ಹೋಗುತ್ತಿದೆ. ತುರ್ತು ಪರಿಸ್ಥಿತಿ ಇದೆ ಎಂದು 55 ಸಾವಿರ ರೂಪಾಯಿ ಕಳಿಸಿ ಅಂತ ಕೇಳುತ್ತಿದ್ದಾರೆ. ಖಚಿತಪಡಿಸಲು ಕರೆ ಮಾಡಿದರೆ ಫೋನ್ ರೀಚ್ ಆಗುವುದಿಲ್ಲ. ಕೆಲವರು ನಂಬಿ ಹಣ ಕಳುಹಿಸಿದ್ದಾರೆ. ಜನರು ಎಚ್ಚರಿಕೆಯಿಂದಿರಬೇಕು. ಇಂತಹ ಮೆಸೇಜ್ ಬಂದರೆ ದುಡ್ಡು ಕಳಿಸಬೇಡಿ," ಎಂದು ಉಪೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ನನ್ನ ಮಗನಿಗೂ ಹಾಗೆಯೇ ಆಗಿದೆ. ನಿಜ ಇರಬಹುದು ಎಂದುಕೊಂಡು ಅವರು ದುಡ್ಡು ಹಾಕಿದ್ದಾನೆ. ಕೆಲವು ಸ್ನೇಹಿತರದ್ದೂ ಸೇರಿ ಲಕ್ಷಾಂತರ ರೂಪಾಯಿ ಹೋಗಿದೆ. ಇನ್ನೂ ಯಾರೆಲ್ಲ ಮಾಡಿದ್ದಾರೋ ಗೊತ್ತಿಲ್ಲ. ಅದನ್ನೆಲ್ಲ ಚೆಕ್ ಮಾಡಬೇಕು’ ಎಂದಿದ್ದಾರೆ ಉಪೇಂದ್ರ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?