ನಮ್ಮ ಮೆಟ್ರೋ: ಹಸಿರು ಮಾರ್ಗದ ಈ ನಿಲ್ದಾಣಗಳ ನಡುವೆ ರೈಲು ಸಂಚಾರ 2 ದಿನ ಬಂದ್

ನಮ್ಮ ಮೆಟ್ರೋ: ಹಸಿರು ಮಾರ್ಗದ ಈ ನಿಲ್ದಾಣಗಳ ನಡುವೆ ರೈಲು ಸಂಚಾರ 2 ದಿನ ಬಂದ್
ನಮ್ಮ ಮೆಟ್ರೋ (Namma Metro) ಬೆಂಗಳೂರು ಜನರ ಜೀವನಾಡಿಯಾಗಿದೆ. ಸುಗಮ ಮತ್ತು ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ ಬಹಳಷ್ಟು ಅನುಕೂಲಕಾರಿಯಾಗಿದೆ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 8 ಲಕ್ಷ ಜನರು ಸಂಚರಿಸುತ್ತಾರೆ ಎಂದು ವರದಿಯಾಗಿದೆ. ನಮ್ಮ ಮೆಟ್ರೋದ ಈ ಮಾರ್ಗದಲ್ಲಿ ಈ ನಿಲ್ದಾಣಗಳ ನಡುವೆ ಎರಡು ದಿನ ಸಂಚಾರ ಬಂದ್ ಇರಲಿದೆ. ಯಾವ ಮಾರ್ಗ, ಯಾವ ದಿನಾಂಕ ಇಲ್ಲಿದೆ ಮಾಹಿತಿ.
ನಮ್ಮ ಮೆಟ್ರೋದ ಹಸಿರು ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಕೈಗೊಳ್ಳಲಾಗಿದೆ. ಹೀಗಾಗಿ ಕೆಲವು ದಿನಗಳು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೆ ಮೆಟ್ರೋ ರೈಲು ಸಂಚಾರ ಇಂದು (ಆ.30) ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ನಿಲ್ದಾಣಕ್ಕೆ ಬಂದು ವಾಪಸ್ಸು ಹೋಗುತ್ತಿದ್ದಾರೆ. ಮೆಟ್ರೋ ಸಂಚಾರ ಇಲ್ಲ, ಇದರಿಂದ ಸರಿಯಾದ ಸಮಯಕ್ಕೆ ಆಫೀಸ್ಗೆ ಹೋಗಲು ಆಗುತ್ತಿಲ್ಲ. ಆಟೋಗಳು ಬುಕ್ ಆಗುತ್ತಿಲ್ಲ, ಇಲ್ಲಿರುವ ಆಟೋದವರು ಮೀಟರ್ ಮೇಲೆ 50 ರೂ. ಕೇಳುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6 ಮತ್ತು 11ರಂದು ನಮ್ಮ ಮೆಟ್ರೋ ರೈಲು ಸಂಚಾರ ಪೂರ್ಣ ದಿನ ಸ್ಥಗಿತವಾಗಲಿದೆ. ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲುಗಳ ಸಂಚಾರ ಇರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಾಗಸಂದ್ರದಿಂದ ಮಾದವರ ನಡುವೆ ವಿಸ್ತರಿತ ಮೆಟ್ರೋ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 2019ರ ಮಧ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾದೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿ ಹತ್ತು ಹಲವು ಸವಾಲು, ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದೆ.
ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿವೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






