ನಮ್ಮ ಸರ್ಕಾರ ಬಂದ್ಮೇಲೆ ಮಂಗಳೂರಲ್ಲಿ ಕೋಮು ಸಂಘರ್ಷಗಳಿಗೆ ಬ್ರೇಕ್ ಬಿದ್ದಿದೆ: ಸಿದ್ದರಾಮಯ್ಯ
ಮಂಗಳೂರು: “ಜಾತಿ, ಧರ್ಮದ ಹೆಸರಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ ವನ್ ಇತ್ತು. ಆದರೆ ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ತೂರಿನಲ್ಲಿ ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ ಅವರ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಶೋಕ ಜನಮನ–2025 ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕೆಲವರು ನಮ್ಮ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡ್ತಾರೆ. ಸರ್ಕಾರದ ಬಳಿ ದುಡ್ಡಿಲ್ಲ ಅಂತಾರೆ. ದುಡ್ಡಿಲ್ಲದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಡೋದಕ್ಕೆ ಆಗುತ್ತಿತ್ತಾ? ಈಗ ಕೋಮು ಸಂಘರ್ಷಗಳಿಗೆ ಕಡಿವಾಣ ಬಿದ್ದಿದೆ. ಜಗಳ ಮಾಡಿದರೆ ಸಾಯೋದು ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಅಲ್ಲ. ಆದ್ದರಿಂದ ಎಲ್ಲರೂ ಸೌಹಾರ್ದತೆಯಿಂದ ಇರಬೇಕು,” ಎಂದು ಸಿಎಂ ಹೇಳಿದರು.
ಅವರು ಮುಂದುವರಿದು, “ಸುಳ್ಳು ಸುದ್ದಿಗಳಿಂದ ಕೋಮು ಸಂಘರ್ಷ ಸೃಷ್ಟಿಸಿದರೆ ಕಾನೂನು ಕ್ರಮ ತಪ್ಪದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡಲು ಸರ್ಕಾರ ಬದ್ಧವಾಗಿದೆ,” ಎಂದರು.
ಅಶೋಕ್ ರೈ ಅವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ಸಿದ್ದರಾಮಯ್ಯ, “ಅವರು ಪ್ರತಿವರ್ಷ ಸಾವಿರಾರು ಜನರಿಗೆ ವಸ್ತ್ರದಾನ ಮಾಡುತ್ತಿದ್ದಾರೆ. ಶ್ರೀಮಂತರಾದವರು ಬಡವರ ಸಹಾಯಕ್ಕೆ ಬರಬೇಕು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಇದು ಮುಖ್ಯ,” ಎಂದು ಹೇಳಿದರು.
ಅವರು ಕೊನೆಯಲ್ಲಿ, “ಬಸವಣ್ಣ ಹೇಳಿದಂತೆ ಕಾಯಕ ಮತ್ತು ದಾಸೋಹದ ಮಾರ್ಗವೇ ನಿಜವಾದ ಸೇವೆ. ಸಂವಿಧಾನದ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ,” ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?