ನವರಾತ್ರಿ 7ನೇ ದಿನ: ಈ ದಿನ ದುರ್ಗೆ ಭಯಂಕರ ರೂಪದಲ್ಲಿ ಕಾಣಿಸಿಕೊಳ್ತಾಳೆ ಏಕೆ..?
ನವರಾತ್ರಿಯ ಏಳನೇ ದಿನ ತಾಯಿ ಕಾಲರಾತ್ರಿಯನ್ನು ಆರಾಧಿಸಲಾಗುತ್ತದೆ. ಈ ಅವತಾರವು ದುರ್ಗೆಯ ಅತ್ಯಂತ ಉಗ್ರರೂಪವಾಗಿದ್ದು, ಅಂಧಕಾರ, ಭಯ ಮತ್ತು ದುಷ್ಟಶಕ್ತಿಗಳನ್ನು ದೂರ ಮಾಡುವ ಶಕ್ತಿ ಹೊಂದಿದ್ದಾಳೆ. ತಾಯಿಯನ್ನು ಪೂಜಿಸಿದರೆ ಭಯವಿಲ್ಲದ ಧೈರ್ಯ, ಧನಾತ್ಮಕ ಶಕ್ತಿ ಮತ್ತು ಸುಖಶಾಂತಿ ಜೀವನದಲ್ಲಿ ಬೆಳೆಯುತ್ತದೆ ಎಂದು ನಂಬಿಕೆ.
ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ದೂರ ಮಾಡುತ್ತಾಳೆ. ಜೊತೆಗೆ ಭಕ್ತರಿಗೆ ಹೆಚ್ಚಿನ ಸಂತೋಷ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಎಂದು ಕರೆಯಲಾಗುತ್ತದೆ.
ಮಾತೆ ಕಾಲರಾತ್ರಿಯು ಕಪ್ಪು ಮೈ ಬಣ್ಣವನ್ನು ಹೊಂದಿರುತ್ತಾಳೆ. ಕತ್ತೆಯ ಮೇಲೆ ಕುಳಿತಿರುವ ಇವಳು ಬಿಚ್ಚು ಮುಡಿಯ ಕೇಶರಾಶಿಯನ್ನು ತನ್ನ ಸುತ್ತಲೂ ಹರಡಿಕೊಂಡಿದ್ದಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಮತ್ತೊಂದರಲ್ಲಿ ಕಬ್ಬಿಣದ ಮುಳ್ಳು ಹಿಡಿದಿರುತ್ತಾಳೆ. ಬಲಗಡೆಯ ಎರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ಹೊಂದಿದ್ದಾಳೆ.
ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಭತ್ತು ಅವತಾರಗಳನ್ನು ನೆನೆದು ಪೂಜೆ ಮಾಡುವುದು ಮನೆಗೆ ಸುಖ, ಶಾಂತಿ, ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ. ತಾಯಿಗೆ ಅರ್ಪಿಸುವ ಪ್ರಸಾದವು ಹಾಲು, ಜೇನುತುಪ್ಪವನ್ನು ಒಳಗೊಂಡಿದ್ದರೇ ಒಳ್ಳೆಯದು.
ಪಾಯಸವೂ ಕೂಡ ಶ್ರೇಷ್ಠವೇ. ಮನುಷ್ಯನಿಗೆ ದುಃಖ, ನೋವು, ವಿನಾಶ ಮತ್ತು ಸಾವನ್ನು ಎಂದಿಗೂ ತಪ್ಪಿಸಲಾಗದು. ಅದು ಯಾರನ್ನೂ ಬಿಡುವುದಿಲ್ಲ. ಇವು ಜೀವನದ ಕಹಿ ಸತ್ಯಗಳು ಮತ್ತು ಅವುಗಳನ್ನು ನಿರಾಕರಿಸುವುದು ಅಸಾಧ್ಯ ಎಂಬುದನ್ನು ತಾಯಿ ಅರ್ಥ ಮಾಡಿಸುತ್ತಾಳೆ. ಇನ್ನು ತಾಯಿ ಕಾಲರಾತ್ರಿಯ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ ಧೈರ್ಯ ತುಂಬಿಕೊಳ್ಳುತ್ತದೆ.
ಕಾಲರಾತ್ರಿಯ ಪೂಜೆ ಹೇಗೆ ಮಾಡಬೇಕು? ರಾತ್ರಿ ಅರಳುವ ಮಲ್ಲಿಗೆ ಹೂವು ಕಾಲರಾತ್ರಿಗೆ ಅರ್ಪಿಸಲು ಪ್ರಸಕ್ತವಾದ ಹೂವು. ಕಾಲರಾತ್ರಿಗೆ ಪೂಜೆ ಸಲ್ಲಿಸುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಬೇಕು. ಬಳಿಕ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು. ಈ ದಿನ ದೇವಿಗೆ ಅನ್ನದಿಂದ ಮಾಡಿದ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.
ನಿಮ್ಮ ಪ್ರತಿಕ್ರಿಯೆ ಏನು?